ಶಿವಮೊಗ್ಗ
ಶಿವಮೊಗ್ಗ ನಗರ ಕ್ಷೇತ್ರಕ್ಕೆ ಚನ್ನಬಸಪ್ಪ ಹೆಸರು ಅಂತಿಮವಾದರೆ, ಮಾನ್ವಿ ಕ್ಷೇತ್ರಕ್ಕೆ ಬಿ.ವಿ. ನಾಯಕ್ ಅವರ ಹೆಸರನ್ನು ಘೋಷಿಸಲಾಗಿದೆ. ಇದೇ ವೇಳೆ ಹಾಲಿ ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ನಂತರ ಅವರ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು.
ಇದೀಗ ಬಿಜೆಪಿ ಕಾರ್ಯಕರ್ತ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು, ಈ ಬಗ್ಗೆ ಸ್ವತಃ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದು, “ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್ ನೀಡಿರುವುದಕ್ಕೆ ಸಂತಸವಾಗಿದೆ. ಅವರು ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ,” ಎಂದು ತಿಳಿಸಿದರು. “ಆಡಳಿತದಲ್ಲಿ ಅನುಭವ ಇರುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ, ನಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆಲುವಿಗೆ ಶ್ರಮಿಸಲಿದ್ದೇವೆ,” ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.