ರಾಜಕೀಯವಾಗಿ ನನ್ನನ್ನುಮುಗಿಸಲು ಸಾಧ್ಯವಿಲ್ಲ

ತುರುವೇಕೆರೆ:


ಹೋರಾಟದ ಮೂಲಕ ರಾಜಕೀಯಕ್ಕೆ ಬಂದ ಈ ದೇವೇಗೌಡನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲು ಸಾಧ್ಯವಿಲ್ಲ, ಜೀವ ಇರುವವರೆಗೂ ರಾಜ್ಯ ಸುತ್ತಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯ ಗತಾಯ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ವಿಧಾನ ಪರಿಷತ್ ಚುನಾವನೆ ಹಿನ್ನಲೆಯಲ್ಲಿ ಪಟ್ಟಣದ ಚೌದ್ರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯ ಜವಾಬ್ದಾರಿ ನನ್ನದೆ :

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ತುಮಕೂರು ಕ್ಷೇತ್ರಕ್ಕೆ ನನ್ನನ್ನು ಕರೆತಂದು ಚಕ್ರವ್ಯೂಹ ರಚಿಸಿ ಸೋಲಿಸಿದರು ಎಂದು ಆರೋಪಿಸಿದ ಅವರು, ಸೋಲಿನ ಪ್ರತಿಕಾರವಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ.

ನಿಮ್ಮ ಈ ದೇವೇಗೌಡ ತುಮಕೂರು ಜಿಲ್ಲೆಯ ಜವಬ್ದಾರಿ ತೆಗೆದುಕೊಂಡಿದ್ದು, ಜಿಲ್ಲೆಯ 9 ತಾಲೂಕಿನಲ್ಲಿ ಈಗಾಗಲೇ ಪ್ರಚಾರ ಮುಗಿಸಿದ್ದೇನೆ. ಈ ಚುನಾವಣೆಯಲ್ಲಿ ನಿಮ್ಮ ಶಕ್ತಿ ತೋರಿಸಬೇಕಿದೆ. ನಿಮ್ಮಲ್ಲಿ ಕೈಮುಗಿದು ಕೇಳುತ್ತೇನೆ. ನಮ್ಮ ಅಭ್ಯರ್ಥಿ ಅನಿಲ್‍ಕುಮಾರ್ ಗೆಲ್ಲಿಸುವ ಮೂಲಕ ಪ್ರಾದೇಶಿಕ ಪಕ್ಷ ಉಳಿಸಲು ಪಣ ತೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ನನ್ನ ಕುರಿತಾದ ಪುಸ್ತಕ ಓದಿ :

ತುಮಕೂರು ಜಿಲ್ಲೆಯಲ್ಲಿ ತುರುವೇಕೆರೆ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧವಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚು ಸಲ ನಮ್ಮ ಪಕ್ಷ ಗೆದ್ದಿದೆ. ಈ ಬಾರಿಯೂ ಹೆಚ್ಚಿನ ಮತವನ್ನು ನೀಡಬೇಕು. 1994 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇವೇಗೌಡ ಮುಖ್ಯಮಂತ್ರಿಯಾಗಬೇಕೆಂದು ಈ ಭಾಗದಲ್ಲಿನ ಸಾವಿರಾರು ಮುಖಂಡರು, ಕಾರ್ಯಕರ್ತರು ಹೋರಾಟ ಮಾಡಿದ್ದಾರೆ.

ಆಗ 18 ಲೋಕಸಭಾ ಸದಸ್ಯರನ್ನು ಹೊಂದಿದ್ದ ನಾನು, ಪ್ರಧಾನಿಯಾಗಿ ಕೆಲವು ತಿಂಗಳು ಕೆಲಸ ಮಾಡಿದ್ದೆ. ಸಾಮಾನ್ಯ ಒಬ್ಬ ರೈತನ ಮಗ ಪ್ರಧಾನಿಯಾಗಿ ಜನಸಮಾನ್ಯರಿಗೆ ಯಾವ ರೀತಿ ಕಾರ್ಯಕ್ರಮಗಳನ್ನು ನೀಡಿದ್ದಾನೆ, ಇಡೀ ದೇಶಕ್ಕೆ ಕೊಡುಗೆ ಏನು? ನೆರೆಯ ರಾಷ್ಟ್ರಗಳ ಜೊತೆ ಯಾವ ರೀತಿಯ ಸಂಭಂದ ಹೊಂದಿದ್ದರು? ಎಂಬುದನ್ನು ಇಂಗ್ಲೀಷ್ ಪುಸ್ತಕವೊಂದರಲ್ಲಿ ಬರೆಯಲಾಗಿದೆ ಇದನ್ನು ಎಲ್ಲರೂ ಓದಬೇಕಿದೆ ಎಂದು ಮಾಜಿ ಪ್ರಧಾನಿ ತಿಳಿಸಿದರು.

ಕಾಂಗ್ರೆಸ್ ಮುಖಂಡರಿಗೆ ಟಾಂಗ್ :

ಈ ದೇವೇಗೌಡ ಸ್ವಾರ್ಥಕ್ಕೆ ಎಂದೂ ರಾಜಕೀಯವನ್ನು ಬಳಸಿಕೊಂಡವನಲ್ಲ. ಅಹಿಂದ ಹಾಗೂ ಹಿಂದುಳಿದ ವರ್ಗದವರು ಇಂದು ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಅಧಿಕಾರ ಅನುಭವಿಸಲು ಕಾರಣ ನಾನು ಮಾಡಿದ ಮೀಸಲಾತಿಯಿಂದ ಎಂಬುದನ್ನು ಅಹಿಂದ ನಾಯಕರು ಮರೆಯಬಾರದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ಅಭ್ಯರ್ಥಿ ಅನಿಲ್‍ಕುಮಾರ್ ಮಾತನಾಡಿ, ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮತದಾರರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಅಧ್ಯಕ್ಷ ಸ್ವಾಮಿ, ಮುಖಂಡರಾದ ಪಿ.ಎಚ್.ಧನಪಾಲ್, ದೊಡ್ಡಘಟ್ಟ ಚಂದ್ರೇಶ್, ಬೆಳ್ಳಿ ಲೋಕೇಶ್, ಬೇಬಿ ತ್ಯಾಗರಾಜು, ಲೀಲಾವತಿ ಗಿಡ್ಡಯ್ಯ, ಚಂದ್ರೇಗೌಡ, ರಾಜೀವ್, ವಿಜಿ, ಎನ್.ಆರ್.ಸುರೇಶ್, ಬಾಣಸಂದ್ರ ರಮೇಶ್, ರಾಮಚಂದ್ರು, ವೆಂಕಟಾಪುರ ಯೋಗೀಶ್, ಎ.ಬಿ.ಜಗದೀಶ್, ನಂಜೇಗೌಡ, ಜಪ್ರುಲ್ಲಾಖಾನ್, ಯೋಗಾನಂದ್ ಸೇರಿದಂತೆ ಮುಖಂಡರು, ಗ್ರಾಪಂ ಹಾಗೂ ಪಪಂ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
06 ಟಿವಿಕೆ : 03 ಪೋಟೋ : ವಿಧಾನ ಪರಿಷತ್ ಚುನಾವನೆ ಹಿನ್ನಲೆಯಲ್ಲಿ ಪಟ್ಟಣದ ಚೌದ್ರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಸಮಾವೇಶವನ್ನು ಮಾಜಿ ಪ್ರಧಾನಿ ದೇವೇಗೌಡ ಉದ್ಘಾಟಿಸಿದರು.

ತುಮಕೂರಿನಿಂದ ಸ್ಪರ್ಧೆ, ಮೋದಿಗೆ ಹೇಳಿದ್ದೆ :

ಲೋಕಸಭಾ ಚುನಾವಣೆಗೆ ತುಮಕೂರಿನಿಂದ ಸ್ಪರ್ಧಿಸುವ ಭಾವನೆ ಎಂದಿಗೂ ಇರಲಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ, ಸೋನಿಯಾಗಾಂಧಿ ಸೇರಿದಂತೆ ಹಲವು ಮುಖಂಡರ ಜೊತೆ ವಿಷಯ ಹಂಚಿಕೊಂಡಿದ್ದೆ. 27 ವರ್ಷ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಆದರೇ ಕೆಲವರ ಷಡ್ಯಂತ್ರದಿಂದ ಸೋಲುಂಟಾಯಿತು.
       -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ದೇವೇಗೌಡರನ್ನು ಸೋಲಿಸಿದ್ದು ಕಪ್ಪುಚುಕ್ಕೆ :

ಯಾವುದೇ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅತಿ ಹೆಚ್ಚು ಮತ ತಂದು ಕೊಡುವ ಕ್ಷೇತ್ರ ತುರುವೇಕೆರೆ ಎಂಬ ಮಾತಿದೆ. ಅದನ್ನು ಈ ಬಾರಿಯೂ ನಿರೂಪಿಸಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದು, ದೇಶ, ರಾಜ್ಯಕ್ಕಾದ ಕಪ್ಪುಚುಕ್ಕೆ. ಅದನ್ನು ಅಳಿಸಲು ಅಭ್ಯರ್ಥಿ ಅನಿಲ್‍ಕುಮಾರ್ ಗೆಲ್ಲಿಸಬೇಕಾದ ಹೊಣೆಗಾರಿಕೆ ನಮ್ಮ ನಿಮ್ಮೆಲರ ಮೇಲಿದೆ.

                                                                                                  -ಡಿ.ಸಿ.ಗೌರಿಶಂಕರ್, ಶಾಸಕ

ಜೀರೋಟ್ರಾಫಿಕ್ ಮಿನಿಸ್ಟರ್, ಜರಿಯುವಾಗ ಗೊತ್ತಿರಲಿಲ್ಲವೆ? : ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರು, ನಾನು ಹಿಂದುಳಿದ ವರ್ಗದವನು ಎಂದು ಹೇಳಿಕೊಳ್ಳತ್ತಾ ಕೇವಲ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗದವರು ಮತ ಹಾಕಿದರೆ ಸಾಕು ಎಂದು ಮತ ಯಾಚಿಸುತ್ತಿದ್ದಾರೆ. ಆದರೇ ಪರಿಶಿಷ್ಟ ಜಾತಿಯ ಡಾ.ಜಿ.ಪರಮೇಶ್ವರ್ ಅವರು, ಉಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರನ್ನು ಜೀರೋಟ್ರಾಫಿಕ್ ಮಿನಿಸ್ಟರ್ ಎಂದು ಜರಿಯುವಾಗ ಇದು ಗೊತ್ತಾಗಲಿಲ್ಲವೆ? ತಾಲ್ಲೂಕಿನಿಂದ ಅತಿಹೆಚ್ಚು ಮತಗಳನ್ನು ನಮ್ಮ ಅಭ್ಯರ್ಥಿಗೆ ಹಾಕಿಸುತ್ತೇನೆ.
                                                                                       -ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ

Recent Articles

spot_img

Related Stories

Share via
Copy link
Powered by Social Snap