ಬೆಂಗಳೂರು:
ಅಶೋಕ್ ರಿಂದ ತೆರವಾದ ಮಂಡ್ಯ ಉಸ್ತುವಾರಿ ಸಚಿವರ ಖಾಲಿ ಜಾಗಕ್ಕೆ ಯಾರು ನೇಮಕ ಆಗುತ್ತಾರೋ ಎಂದು ತೀವ್ರ ಕುತೂಹಲಕ್ಕೂ ಕಾರಣವಾಗಿದ್ದು ಚರ್ಚೆ ಮುಂದುವರಿದಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಗೊಂದಲ ಇನ್ನೂ ಮುಂದುವರಿದಿರುವ ಬೆನ್ನಲ್ಲೇ ಸಚಿವ ನಾರಾಯಣಗೌಡ ಅಸಮಾಧಾನ ಹೊರಹಾಕಿದ್ದು, ನಾನು ಮಂಡ್ಯ ಉಸ್ತುವಾರಿಯನ್ನು ಪಡೆದು ಕೊಳ್ಳುವುದಿಲ್ಲ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡುತ್ತಿದ್ದರೆ ನಾನು ಉಸ್ತುವಾರಿ ಹೊಣೆ ಹೊತ್ತುಕೊಳ್ಳಲು ಆಗುತ್ತಾ ಎಂದು ಪ್ರಶ್ನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಚಿವರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಅವರಲ್ಲಿಯೇ ಯಾರಾದರೂ ಒಬ್ಬರನ್ನು ಉಸ್ತುವಾರಿಯನ್ನಾಗಿ ಮಾಡಲಿ. ಅವರು ಚುನಾವಣೆಯನ್ನು ಗೆಲ್ಲಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಅವರಲ್ಲಿಯೇ ಒಬ್ಬರಿಗೆ ಹೊಣೆ ನೀಡಲಿ. ನಾನು ಅವರ ಜತೆ ಇರುತ್ತೇನೆ. ಗೋಪಾಲಯ್ಯಗೆ ಜವಾಬ್ದಾರಿ ಕೊಟ್ಟಾಗ ನಾನು ಅವರ ಜತೆ ನಿಂತು ಓಡಾಡಿದ್ದೇನೆ. ಮುಂದೆಯೂ ಉಸ್ತುವಾರಿಯಾದವರಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದರು.
ನನಗೆ ಶಿವಮೊಗ್ಗದ ಉಸ್ತುವಾರಿ ಹೊಣೆ ಕೊಟ್ಟಿದ್ದಾರೆ. ನನಗೆ ಈ ಹೊತ್ತಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಕೊಟ್ಟರೆ ಒಪ್ಪಿಕೊಳ್ಳಲಾರೆ. ನಾನು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸವನ್ನು ಅರ್ಧಕ್ಕೆ ಬಿಟ್ಟು, ಇಲ್ಲಿ ಅರ್ಧಕ್ಕೆ ಬಿಟ್ಟು ಕೆಲಸ ಮಾಡುವುದು ಕಷ್ಟ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ