“ಬಿಜೆಪಿ ಮತ್ತು ಜೆಡಿಎಸ್ ನಾಯಕರೇ, ನಿಮ್ಮ ಪ್ರತಿ ಆರೋಪಕ್ಕೂ ನನ್ನ ಬಳಿ ಉತ್ತರವಿದೆ :

ಬೆಂಗಳೂರು: 

    ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರಿ ಸ್ವಾಮ್ಯದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ ನಡುವೆ ಸೋಮವಾರ ತೀವ್ರ ಜಟಾಪಟಿ ನಡೆಯಿತು.

   ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ಲೂಟಿಯಾಗಿದೆ. ಚರ್ಚೆಗೆ ಅವಕಾಶ ಮಾಡಕೊಡಬೇಕು ಎಂದು ಒತ್ತಾಯಿಸಿದರು.

   ಒಬ್ಬ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಚಂದ್ರಶೇಖರನ್ ಪಿ ಅವರು ಜೀವ ಕಳೆದುಕೊಂಡಿದ್ದಾರೆ. ಈ ಹಗರಣದ ಮೂಲಕ ಸರ್ಕಾರದ ‘ದಲಿತ ವಿರೋಧಿ’ ನೀತಿ ಅನಾವರಣಗೊಂಡಿದೆ. ದಲಿತರ ಹಣ ಲೂಟಿ ಮಾಡಲಾಗಿದೆ. ಲೂಟಿ ಹೊಡೆದು ಬೇರೆ ರಾಜ್ಯಗಳಿಗೆ ಹಣ ಕಳಿಸಿಕೊಡಲಾಗಿದೆ. ಈ ತರಹದ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತ ನೂರಕ್ಕೆ ನೂರು ದಲಿತರ ಹಣ ಲೂಟಿ ಆಗಿದೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಈ ವೇಳೆ ಎದ್ದುನಿಂತ ಸಿಎಂ ಸಿದ್ದರಾಮಯ್ಯ, ನಾವು ಎಲ್ಲ ಚರ್ಚೆಗೆ ಸಿದ್ಧರಿದ್ದೇವೆ. ನಿಯಮಾವಳಿ ಪ್ರಕಾರ ಚರ್ಚೆ ಮಾಡಬೇಕು. ಎಲ್ಲ ಚರ್ಚೆಗೂ ನಮ್ಮ ಸರ್ಕಾರ ಉತ್ತರ ಕೊಡಲು ಸಿದ್ಧವಿದೆ. ಬಿಜೆಪಿಗೆ ಹಗರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇವರ ಕಾಲದಲ್ಲಿ ಅದೆಷ್ಟು ಲೂಟಿ ಹೊಡೆದಿದ್ದಾರೆ ಎಂದು ತಿರುಗೇಟು ನೀಡಿದರು.

   ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸೇರಿ ಎಲ್ಲಾ ಹಗರಣಗಳ ವಿಚಾರವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ. ಈ ಪ್ರಕರಣ ಸಂಬಂಧ ಕಾನೂನು ರೀತಿಯಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕೆಂದರೆ ತನಿಖೆ ಇನ್ನೂ ಪೂರ್ಣವಾಗಿಲ್ಲ. ಆದರೂ ರಾಜ್ಯದ ಜನರಿಗೆ ಮಾಹಿತಿ ನೀಡುವ ಕಾರಣಕ್ಕೆ ಚರ್ಚೆಗೆ ನಾವು ಸಿದ್ಧ. ಆದರೆ ಪ್ರಶ್ನೋತ್ತರ ಅವಧಿ ಬಳಿಕ ಚರ್ಚೆ ಮಾಡೋಣ ಎಂದು ತಿಳಿಸಿದರು.

   ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಜಾರಿ ನಿರ್ದೇಶನಾಲಯದವರು ಅಕ್ರಮದಲ್ಲಿ ತಮ್ಮ ಪಾತ್ರದ ಬಗ್ಗೆ ನಾಗೇಂದ್ರ ಒಪ್ಕೊಂಡಿಲ್ಲ. ಇದು ರಿಮ್ಯಾಂಡ್ ಅರ್ಜಿಯಲ್ಲಿ ಕೊಟ್ಟಿರುವ ಮಾಹಿತಿ. ಇದು ಒಪ್ಪಿತ ಸತ್ಯಾಂಶ ಅಲ್ಲ. ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಆಗಿಲ್ಲ. 89.62 ಕೋಟಿ ರೂ. ಅಕ್ರಮ ಆಗಿದೆ. ತಪ್ಪು ಮಾಹಿತಿ ಹೋಗಬಾರದು ಅಂತ ಹೇಳಿದರು. 

   ನಾನು ಯಾರನ್ನೂ ಡಿಫೆಂಡ್ ಮಾಡ್ಕೊಳ್ತಿಲ್ಲ, ಯಾರ ರಕ್ಷಣೆಯೂ ಮಾಡ್ತಿಲ್ಲ. 187 ಕೋಟಿ ರೂ. ಲೂಟಿಯಾಗಿರೋದನ್ನ ಯಾರೂ ಒಪ್ಪಿಕೊಂಡಿಲ್ಲ. ನಾನಾಗಲೀ, ನಾಗೇಂದ್ರ ಆಗಲೀ ಒಪ್ಪಿಕೊಂಡಿಲ್ಲ. ಇದು ಇಡಿಯವರು ಹೇಳಿರೋದು, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಎಂದು ಸಿಎಂ ಸ್ಪಷ್ಟನೆ ನೀಡಿದರು.

   ಇದಕ್ಕು ಮುನ್ನ “ಪ್ರತಿಯೊಂದು ಆರೋಪಕ್ಕೂ” ನಮ್ಮ ಬಳಿ ಉತ್ತರಗಳಿವೆ. ರಾಜಕೀಯವಾಗಿ ದುರುದ್ದೇಶಪೂರಿತ ಟೀಕೆಗಳಿಗೆ ಹೆದರಿ ಶಾಂತವಾಗಿ ಕುಳಿತುಕೊಳ್ಳುವುದು ನಮ್ಮ ಸ್ವಭಾವದಲ್ಲಿಲ್ಲ.ಬಿಜೆಪಿ ಮತ್ತು ಜೆಡಿಎಸ್ ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಮೂಲಕ “ಹಿಟ್ ಅಂಡ್ ರನ್” ತಂತ್ರ ಅಳವಡಿಸಿಕೊಂಡಿವೆ. ಇದಕ್ಕೆ ಸದನದಲ್ಲಿ ಉತ್ತರ ನೀಡುತ್ತೇವೆ.

   “ಬಿಜೆಪಿ ಮತ್ತು ಜೆಡಿಎಸ್ ನಾಯಕರೇ, ನಿಮ್ಮ ಪ್ರತಿ ಆರೋಪಕ್ಕೂ ನನ್ನ ಬಳಿ ಉತ್ತರವಿದೆ. ಇದುವರೆಗೆ ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಾ, ಎಲ್ಲೋ ದೂರ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದಂತಲ್ಲ. ಇದು ಸದನ, ನಿಮ್ಮ ಹಿಟ್ ಅಂಡ್ ರನ್ ಗೆ ಇಲ್ಲಿ ಅವಕಾಶ ಇಲ್ಲ” ಎಂದು ಸಿಎಂ ಹೇಳಿದ್ದರು.

    ಇನ್ನು ವಿಧಾನ ಪರಿಷತ್ ನಲ್ಲೂ ವಾಲ್ಮೀಕಿ ಹಗರಣ ಪ್ರಸ್ತಾಪಿಸಲು ಬಿಜೆಪಿ ಸದಸ್ಯ ಸಿ ಟಿ ರವಿ ಅವರು ಮುಂದಾದರು. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಹೀಗಾಗಿ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.ಗೃಹ ಸಚಿವ ಜಿ ಪರಮೇಶ್ವರ ಅವರು ನಿಯಮಗಳನ್ನು ಉಲ್ಲೇಖಿಸಿ, ಪ್ರಕರಣವು ಎಸ್‌ಐಟಿ, ಸಿಬಿಐ ಮತ್ತು ಇಡಿಯಿಂದ ತನಿಖೆಯ ಹಂತದಲ್ಲಿದೆ. ಇದನ್ನು ಚರ್ಚಿಸಲು ಸಾಧ್ಯವಿಲ್ಲ ಮತ್ತು ಅದಕ್ಕೆ ಸಭಾಪತಿ ಅವಕಾಶ ನೀಡಬಾರದು ಎಂದು ಹೇಳಿದರು.ಈ ಕುರಿತು ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದ್ದರಿಂದ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಕೇಳುವುದಾಗಿ ತಿಳಿಸಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸದನವನ್ನು ಮುಂದೂಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap