ಬೆಂಗಳೂರು:
ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡುವ ವಿಚಾರ ನನಗೆ ಗೊತ್ತಿಲ್ಲ, ನಿಮ್ಮ ಮೂಲಕ ಮಾಧ್ಯಮಗಳಲ್ಲಿ ಇದನ್ನು ನೋಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಲೋಕಸಭೆ ಚುನಾವಣೆ ಪೂರ್ವ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಡಿ ಕೆ ಶಿವಕುಮಾರ್ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ನನ್ನ ಜೊತೆ ಯಾರೂ ಮಾತನಾಡಿಲ್ಲ, ನಾನು ಯಾರಿಗೂ ಟಾಸ್ಕ್ ಕೊಟ್ಟಿಲ್ಲ. ಆದರೆ ಎಲ್ಲರೂ ನನಗೆ ಪರಿಚಯಸ್ಥರು, ರಾಜ್ಯದ 224 ಶಾಸಕರು ಕೂಡ ನನಗೆ ಪರಿಚಯಸ್ಥರು ಎಂದರು.
ಎಲ್ಲರ ಜೊತೆಗೂ ರಾಜಕೀಯವಾದ ಸಂಬಂಧ ಇಲ್ಲದೇ ಹೋದರೂ ವೈಯಕ್ತಿಕವಾದ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತೇವೆ. ಅವರು ನಮ್ಮ ಜೊತೆ ಪರಿಚಯ, ಸಂಬಂಧ ಬೆಳೆಸಿಕೊಂಡಿರುತ್ತಾರೆ, ಅವರ ಹೆಸರಿಗೆ ನಾನೇಕೆ ಧಕ್ಕೆ ತರಲಿ ಎಂದು ಕೇಳಿದರು.
2019ರಲ್ಲಿ ಪಕ್ಷ ತೊರೆದು ಹೋದವರು ಮತ್ತೆ ಬಂದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆಯೇ ಎಂದು ಕೇಳಿದಾಗ, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬಾಂಬೆ ಬಾಯ್ಸ್ ಘರ್‌ವಾಪ್ಸಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆಪರೇಷನ್‌ಗೆ ಕಾಂಗ್ರೆಸ್ ಕೈ ಹಾಕಿದೆ ಎನ್ನುವ ವ ಹೊತ್ತಲ್ಲೇ ಯಶವಂತಪುರದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಎಸ್.ಟಿ ಸೋಮಶೇಖರ್ ನಡೆಸಿದ್ದ ಸಭೆಯಲ್ಲಿ ನೆಲಮಂಗಲ ಕೈ ಶಾಸಕ ಶ್ರೀನಿವಾಸ್ ಭಾಗಿಯಾಗಿ ಡಿಕೆ ಟಾಸ್ಕ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
