ತುರುವೇಕೆರೆ:
ಸರ್ಕಾರಿ ನೌಕರರ ಬೇಡಿಕೆಗೆ ಮತ್ತು ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ತಮ್ಮ ಗೃಹ ಕಛೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರ ಸಂಬಳ ಅವಲಂಬಿತರು ಕೇಂದ್ರ ಮತ್ತು ರಾಜ್ಯಕ್ಕೆ ಇರುವ ತಾರತಮ್ಯವನ್ನು ಈ ಮುಂಚೆಯೇ ಸರಿಪಡಿಸಬೇಕಿತ್ತು. ಎಲ್ಲ ಇಲಾಖೆಗಳ ಸರ್ಕಾರಿ ನೌಕರರು, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳ ನೌಕರರು ಮಾರ್ಚ್ 1ರಂದು ತಮ್ಮ ಮನೆಯಲ್ಲಿಯೇ ಇದ್ದು ಕರ್ತವ್ಯಕ್ಕೆ ಗೈರು ಹಾಜರಿ ಆಗುವ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರ ವೇತನ ಆಯೋಗ ರಚನೆ ಮಾಡಿದ್ದು ಸರ್ಕಾರಿ ನೌಕರರಿಗೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು ಶೇ.40ರಷ್ಟು ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸುವುದು. ಹಾಗೆಯೇ ಪಂಜಾಬ್, ರಾಜಾಸ್ಥಾನ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತ್ತೀಸ್‌ಗಡ, ರಾಜ್ಯಗಳ ಮಾದರಿಯಲ್ಲಿ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸರ್ಕಾರಿ ನೌಕರರು ತಮ್ಮ ಬೇಡಿಕೆಗಳಿಗಾಗಿ ಮಾ.1ರಿಂದ ಮುಷ್ಕರಕ್ಕೆ ಕರೆ ಕೊಟ್ಟಿದೆ.
ಇದರಿಂದ ಜನಸಾಮಾನ್ಯರಿಗೆ ಆಗುವಂತ ತೊಂದರೆಗಳನ್ನು ಸರ್ಕಾರ ಅರ್ಥಮಾಡಿಕೊಂಡು ಈ ಕೂಡಲೇ ಬೇಡಿಕೆಗಳಿಗೆ ಸ್ಪಂದಿಸಿ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾನೂ ಸಹಾ ಅವರ ಬೇಡಿಕೆ ಈಡೇರಿಕೆಗೆ ಅವರೊಂದಿಗೆ ಹೋರಾಟದಲ್ಲಿ ಭಾಗಿಯಾಗಲಿದ್ದೇನೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ