‘ಆಗ ನಾನು ಸಿಎಂ ಅಲ್ಲ, ಕ್ಲರ್ಕ್‌ ಆಗಿದ್ದೆ: ಈಗ 10 ವರ್ಷಗಳ ಹಗರಣ ಲಿಸ್ಟ್‌ ಮಾಡ್ಕೊಂಡು ಬಂದ್ರೂ ಪ್ರಯೋಜನವಾಗ್ಲಿಲ್ಲ’

ಬೆಂಗಳೂರು:

 ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ನಾನು ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ, ಸದನ ಸರಿಯಾಗಿ ನಡೆಯಲೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನೀವು ಕೂಡ 14 ತಿಂಗಳು ಆಡಳಿತ ಮಾಡಿದ್ದೀರಿ.

ಆಗ ಭ್ರಷ್ಟಾಚಾರ ಸರಿ ಮಾಡಬಹುದಿತ್ತಲ್ಲ ಎಂದು ಯಾರಾದರೂ ಕೇಳಬಹುದು. ಆದರೆ, ನಾನು ಆಗ ಸಿಎಂ ಅಲ್ಲ, ಎಫ್‌ಡಿಸಿ (ಪ್ರಥಮ ದರ್ಜೆ ಗುಮಾಸ್ತ) ಕೆಲಸ ಮಾಡಿದ್ದೆ ಅಷ್ಟೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ಹೊರ ಹಾಕಿದರು.

ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ. ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನೂ ಧ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ ಎಂದರು.

ಸುಖಾ ಸುಮ್ಮನೆ ಸದನದ ಕಲಾಪ ವ್ಯರ್ಥ ಮಾಡದೇ ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕಿ ಹೋರಾಟ ಮಾಡಲಿ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟರು. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ ಅಮಾನತು ಮಾಡಿ. ಆ ನಂತರ ಸದನ ನಡೆಸಿ ಎಂದು ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ‘ರಾಜಕೀಯ ಕೋವಿಡ್ ದುರಂತ ‘ ಇದು ಎಂದು ಟೀಕಿಸಿದರು.

ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಜನರು ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಕಾರವಾರದ ಸಂಸದರೊಬ್ಬರು ಹಿಂದೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂಬಂತೆ ಮಾತನಾಡಿದ್ದರು. ಬಿಜೆಪಿಯವರ ಅಜೆಂಡಾಗಳೇ ಈ ರೀತಿ ಇವೆ. ಈ ದೇಶದಲ್ಲಿ ಹಿಂದೂಗಳು ಮಾತ್ರ ಬದುಕಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ. ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ಚುನಾವಣೆಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap