ಎಚ್.ಡಿ.ಕೋಟೆ:
‘ತಾಲ್ಲೂಕಿನ ಒಕ್ಕಲಿಗರ ಭವನಕ್ಕೆ ₹50 ಲಕ್ಷ ನೀಡುವು ದಾಗಿ ಘೋಷಿಸಿದ್ದು, ಅದರಂತೆ ನಡೆದುಕೊಳ್ಳುತ್ತೇನೆ. ಒಕ್ಕಲಿಗರ ಮನೆ ಮಗನಾಗಿ ನಾನಿದ್ದೇನೆ. ನನ್ನನ್ನು ಬೆಂಬಲಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಕಾಂಗ್ರೆಸ್ ಪಕ್ಷದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ರೆ, ಅವರು ಸರ್ಕಾರವನ್ನು ಉಳಿಸಿಕೊಳ್ಳಲಿಲ್ಲ’ ಎಂದು ದೂರಿದರು.‘ಅನಿಲ್ ಚಿಕ್ಕಮಾದು ಸರಳ, ಸಜ್ಜನಿಕೆ ವ್ಯಕ್ತಿ. ಪರಿಶಿಷ್ಟ ಪಂಗಡದ ಯುವಕ ನಾಯಕ. ಅವರಲ್ಲಿ ದುರಹಂಕಾರ ಇಲ್ಲ. ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾನೆ’ ಎಂದು ಶ್ಲಾಘಿಸಿದರು.
‘ಭಾರತ್ ಜೋಡೋ ಯಾತ್ರೆ ವೇಳೆ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಜೊತೆ ಈ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದರು. ವಿಜಯದಶಮಿ ದಿನ ನಿಮ್ಮ ಊರಿನ ಪುಟ್ಟ ದೇವಸ್ಥಾನದಲ್ಲಿ ವಿಜಯದಶಮಿ ಆಚರಿಸಿದ್ದರು. ಒಳ್ಳೆಯ ಶಾಸಕನನ್ನು ಆಯ್ಕೆ ಮಾಡಿದ್ದೀರಿ ಎಂದು ಸೋನಿಯಾ ಗಾಂಧಿ ಅವರು ನನ್ನ ಬಳಿ ಹೊಗಳಿದ್ದರು. ಅನಿಲ್ ಚಿಕ್ಕಮಾದು ಜತೆ ನಾವಿದ್ದೇವೆ’ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರು ನಮ್ಮ ತಂದೆಗೆ ಸಾಕಷ್ಟು ಸಹಾಯ ಮಾಡಿದ್ದರು. ಯುವಕನಾಗಿದ್ದರೂ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಸರಿಯಾದ ಅನುದಾನ ಕೊಟ್ಟಿಲ್ಲ. ಆದರೂ ನಾನು ಹೋರಾಟ ಮಾಡಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
