ಸಿದ್ದರಾಮಯ್ಯ ಮಾತಿಗೆ ತಕ್ಕ ಉತ್ತರ ನೀಡುವೆ : ದೇವೇಗೌಡ

ಹಾಸನ:

    ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಜೆಡಿಎಸ್ ಸ್ಫರ್ಧಿಸಿರುವ ಮೂರು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವುದಲ್ಲದೇ, ಉಳಿದ ಕ್ಷೇತ್ರಗಳಲ್ಲೂ ಪಕ್ಷದ ಶಕ್ತಿಯನ್ನು ಬಿಜೆಪಿಗೆ ಕೊಡಿಸುವ ಮೂಲಕ ಸಿದ್ದರಾಮಯ್ಯ ಮಾತಿಗೆ ತಕ್ಕ ಉತ್ತರ ನೀಡುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದರು.

   ಪಟ್ಟಣದಲ್ಲಿ ಗುರುವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ಧಿಶಕ್ತಿಯಿದೆ. ವಾಕ್ ಚಾತುರ್ಯವಿದೆ. ಈ ದೇಹದಲ್ಲಿ ಶಕ್ತಿ ಇರುವವರೆಗೂ ನನ್ನ ನಂಬಿರುವ ಜನತೆಗಾಗಿ ಹೋರಾಟ ಮಾಡುತ್ತೇನೆ, ನನ್ನ ಈ ಜೀವ ಹಾಗೂ ಜೀವನ ನಾಡಿನ ಜನತೆಗೆ ಮೀಸಲು ಎಂದರು.

   ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಬಿಜೆಪಿ 18 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ನಾಲ್ಕು ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ ಎಂದು ಹೇಳುತ್ತೀರಾ? ಕಾಂಗ್ರೆಸ್‌ ಪಕ್ಷವು ಸುಭದ್ರವಾಗಿದ್ದಿದ್ದರೆ ರಾಹುಲ್ ಗಾಂಧಿ ಕೇರಳಕ್ಕೆ ಏಕೆ ಹೋಗುತ್ತಿದ್ದರು? ಸೋನಿಯಾ ಗಾಂಧಿ ರಾಜ್ಯಸಭೆಗೆ ಏಕೆ ಹೋದರು? ಎಂದು ಅವರು ಪ್ರಶ್ನಿಸಿದರು. 

    ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದರ ಫಲವನ್ನು ಬೆಂಗಳೂರಿನ ಜನ ಈಗ ಅನುಭವಿಸಬೇಕಾಗಿದೆ. ಬರಗಾಲವಿದ್ದು, ನೀರು ಹರಿಸಲು ಸಾಧ್ಯವಿಲ್ಲ ಎಂಬ ದಿಟ್ಟ ಉತ್ತರ ನೀಡಿದ್ದರೆ, ಇಂದು ಜನರು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತಿರಲಿಲ್ಲಎಂದು ಅಭಿಪ್ರಾಯಪಟ್ಟರು.

   ಅವತ್ತಿನ ಕಾಲದಲ್ಲಿಯೇ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು. ಆದರೆ ಅವರಿಂದ ಆಗಲಿಲ್ಲ. ಯಾಕೆಂದರೆ ನಾನು ಮಾಡುವ ಕೆಲಸದಲ್ಲಿ ಯಾವುದೇ ಲೋಪವಿರಲಿಲ್ಲ. ಜನಪರವಾದ ಕೆಲಸ ಮಾಡಿದ್ದೇನೆ. ಸತ್ಯವಾಗಿಯೇ ನಡೆದುಕೊಂಡು ಬಂದಿದ್ದೇನೆ ಎಂದು ವಿರೋಧ ಪಕ್ಷದ ನಾಯಕರಿಗೆ ಚಾಟಿ ಬೀಸಿದರು. ದೇಶದಲ್ಲಿ ಸಮಸ್ಯೆಗಳೆದುರಾದ ವೇಳೆ ಹೋರಾಡಿದ್ದೇನೆ. ನಾನು ಪ್ರಧಾನಿಯಾದ ವೇಳೆ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ದೇಶದ ಏಳು ರಾಜ್ಯಗಳಿಗೆ ಜವಾಹಾರ್ ಲಾಲ್ ನೆಹರು ಹೋಗಿರಲಿಲ್ಲ ನಾನು ಹೋಗಿದ್ದೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link