ರಾಯಬರೇಲಿ:
ಇಂದು ರಾಯಬರೇಲಿ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಎಲೆಕ್ಷನ್ ಸಲುವಾಗಿ ನಡೆಸಿದ ಪ್ರಚಾರದಲ್ಲಿ ತೊಡಗಿ, ಹಲವು ವಿಷಯಗಳನ್ನು ಜನರೊಂದಿಗೆ ಪ್ರಸ್ತಾಪಿಸಿದರು.
ಪ್ರಚಾರಕ್ಕೆ ಆಗಮಿಸಿದ್ದ ಜನಸಾಮಾನ್ಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ‘ಅಂದು ಇಲ್ಲಿ ರೈತರ ಚಳವಳಿ ಇತ್ತು. ರಾಯಬರೇಲಿ ಜನ ಜವಾಹರಲಾಲ್ ನೆಹರು ಅವರಿಗೆ ರಾಜಕೀಯ ತಿಳಿಸಿಕೊಟ್ಟರು. ಆನಂತರ ಅವರು ದೇಶದ ಪ್ರಧಾನಿಯಾಗಿ, ಒಂದು ಸುಭದ್ರ ಅಡಿಪಾಯ ಹಾಕಿದರು. ಅವರ ನಂತರ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದಾಗ ಹಸಿರು ಕ್ರಾಂತಿ, ರಾಷ್ಟ್ರೀಯ ಬ್ಯಾಂಕ್ಗಳು ಚಾಲ್ತಿಗೆ ಬಂದವು’ ಎಂದರು.
‘ಇಂದು ನಾನು ನಿಮ್ಮೊಂದಿಗೆ ಇರಲು ಬಂದಿದ್ದೇನೆ. ಖಂಡಿತ ನಿಮ್ಮ ಜತೆ ಇದ್ದು, ಹೋರಾಟ ನಡೆಸುತ್ತೇನೆ. ನನ್ನನ್ನು ಸ್ವಾಗತಿಸಿರುವ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು’ ಎಂದರು. ಇನ್ನು ಈ ವೇಳೆ ಗುಂಪಲ್ಲಿದ್ದ ಅಭಿಮಾನಿಗಳು, ರಾಹುಲ್ ಜೀ ನಿಮ್ಮ ಮದುವೆ ಯಾವಾಗ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ‘ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತೀನಿ’ ಎಂದು ಹೇಳಿದರು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ