ನಾನು ಯಾವತ್ತೂ ದರ್ಶನ್ ಪರ ನಿಲ್ಲುತ್ತೇನೆ: ಸುಮಲತಾ ಅಂಬರೀಷ್

ಮಂಡ್ಯ: 

   ನನ್ನ ರಾಜಕೀಯ ಜೀವನ ಇನ್ನು ಮುಂದೆಯೂ ಮಂಡ್ಯದಲ್ಲಿಯೇ ಎಂದು ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪುನರುಚ್ಛರಿಸಿದ್ದಾರೆ.

  ಮಂಡ್ಯದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನವರಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ನಾಯಕರು ಮಂಡ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಮನ ಕೊಟ್ಟಿಲ್ಲ, ಕೆಳಹಂತದಲ್ಲಿ ಸಂಘಟನೆ ಮಾಡಿದರೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಹುದು. ನಾನು ರಾಜಕಾರಣ ಮಾಡುವುದಿದ್ದರೆ ಅದು ಮಂಡ್ಯದಲ್ಲಿಯೇ ಎಂದರು.

   ಜನವರಿಯಿಂದ ನಾನು ಇನ್ನಷ್ಟು ಸಕ್ರಿಯವಾಗಿ ಮಂಡ್ಯದಲ್ಲಿ ತೊಡಗಿಕೊಳ್ಳುತ್ತೇನೆ. ಅಗತ್ಯವಿರುವಲ್ಲಿ ನನ್ನನ್ನು ಪ್ರಚಾರಕ್ಕೆ ಕರೆಯುತ್ತಾರೆ, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ನನ್ನ ಅಗತ್ಯವಿಲ್ಲ ಎನಿಸಿರಬಹುದು, ಲೋಕಸಭೆ ಚುನಾವಣೆಯಲ್ಲಿ ಅಗತ್ಯವಿರುವಲ್ಲಿ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆದಿದ್ದರು, ಆಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ ಎಂದು ನಿಖಿಲ್ ಪರ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದರು.

  ಕಳೆದ 5 ವರ್ಷಗಳು ಕ್ಷೇತ್ರದಲ್ಲೆಲ್ಲಾ ಸುತ್ತಾಡಿ ಕೆಲಸ ಮಾಡಿ ಸಾಕಷ್ಟು ದಣಿದು ಹೋಗಿದ್ದೆ, ನನಗೂ ಸ್ವಲ್ಪ ವಿಶ್ರಾಂತಿ ಬೇಕಾಗಿತ್ತು, ಮೈತ್ರಿ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಡಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ವೈಯಕ್ತಿಕವಾಗಿ ನನಗೆ ಮನವಿ ಮಾಡಿಕೊಂಡಿದ್ದರಿಂದ ಅವರ ಮಾತಿಗೆ ಬೆಲೆ ಕೊಟ್ಟು ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟೆ. ಕಾಲುನೋವು ಕೂಡ ಇತ್ತು, ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಜನವರಿ ತಿಂಗಳಿನಿಂದ ಮಂಡ್ಯದಲ್ಲಿ ಸಕ್ರಿಯವಾಗಿ ಓಡಾಡುತ್ತೇನೆ ಎಂದರು.

  ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರುವ ದರ್ಶನ್​ ಪರ ಸುಮಲತಾ ಮಾತನಾಡಿದ್ದಾರೆ. ‘ನಾನು ಯಾವಾಗಲೂ ದರ್ಶನ್​ ಪರ’ ಎಂದು ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳು ಯಾರು ಎಂದು ಕೋರ್ಟ್ ನಿರ್ಧಾರ ಮಾಡಬೇಕೆ ಹೊರತು ನಾವು ನೀವು ಕುಳಿತು ಚರ್ಚೆ ಮಾಡಿದರೆ ಆಗುವುದಿಲ್ಲ, ಸತ್ಯಾಂಶ ಹೊರಗೆ ಬರುವುದಿಲ್ಲ ಎಂದರು.

  ನಾನು ಒಬ್ಬ ತಾಯಿ ಸ್ಥಾನದಲ್ಲಿ ನಿಂತು ದರ್ಶನ್ ಗೆ ಏನು ಹೇಳಬೇಕ ಅದನ್ನು ವೈಯಕ್ತಿಕವಾಗಿ ಹೇಳುತ್ತೇನೆ ಹೊರತು ಮಾಧ್ಯಮಗಳ ಮುಂತೆ ನಿಂತು ಹೇಳುವುದಿಲ್ಲವಲ್ಲ, ತಾಯಿ ಸ್ಥಾನದಲ್ಲಿ ನಾನು ಯಾವಾಗಲೂ ದರ್ಶನ್ ಪರವಾಗಿ ಇದ್ದೇನೆ, ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ ಎಂದಿದ್ದಾರೆ.

   ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿದ್ದೇನೆ. ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಇನ್ನೂ ಅವರಿಗೆ ಟ್ರೀಟ್‌ಮೆಂಟ್ ಬೇಕು, ಆರೋಗ್ಯ ಸರಿಪಡಿಸಿಕೊಳ್ಳಬೇಕು. ದರ್ಶನ್‌ಗೆ ಬೇಲ್ ಬಗ್ಗೆ ಲೀಗಲ್ ಚಾಲೆಂಜ್ಸ್ ಇದೆ. ಅದನ್ನೆಲ್ಲಾ ಸರಿಪಡಿಸಿಕೊಂಡು ಹೊರಗಡೆ ಬರುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೇವೆ ಎಂದರು.

   ನನ್ನ ನಿಲುವು ಏನು ಎಂಬುದನ್ನ ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದೇನೆ. ನಮ್ಮ ಸಂಬಂಧ ಏನಿದೆ ಅದು ಇನ್ನುಂದೆಯೂ ಹಾಗೆ ಇರುತ್ತದೆ. ನನ್ನ ಲೈಫ್ ಇರುವವರೆಗೂ ದರ್ಶನ್ ನನ್ನ ಮಗನೇ. ಕೇಸ್ ಕುರಿತು ನಿಜಾಂಶ ಏನಿದೆ ಅದು ಹೊರಗೆ ಬರಬೇಕು. ನಿರಾಪರಾಧಿ ಅಂತ ಸಾಬೀತು ಆಗಲಿ ಎಂಬುದು ನನ್ನ ಆಸೆ. ದರ್ಶನ್ ಪರ ವಕೀಲರು ನಿಜಾಂಶವನ್ನು ಪ್ರೂವ್ ಮಾಡುತ್ತಾರೆ ಎಂಬ ನಂಬಿಕೆಯಿದೆ. ಇದೆಲ್ಲಾ ಸರಿಯಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

   ಈ ಕೇಸ್ ಬಗ್ಗೆ ಲೀಗಲ್ ವಿಚಾರಗಳು ನಮಗೆ ಗೊತ್ತಾಗಲ್ಲ. ಆದರೆ ವಿಜಯಲಕ್ಷ್ಮಿ ಎಲ್ಲಾ ರೀತಿಯ ಎಫರ್ಟ್ ಹಾಕುತ್ತಿದ್ದಾರೆ. ದರ್ಶನ್‌ಗೆ ಬೆನ್ನು ನೋವು ತುಂಬಾ ಇದೆ. ಸರ್ಜರಿ ಮಾಡಿಸಿಕೊಳ್ಳಲು ಇಷ್ಟ ಇಲ್ಲ ಅಂತ ವಿಚಾರ ಕೇಳಿದೆ. ಸರ್ಜರಿ ಮಾಡಿಸಿದ್ರೆ ರಿಕವರಿ ಟೈಮ್ ಜಾಸ್ತಿ ಬೇಕು. ಈಗಾಗಲೇ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿದೆ. ಸಿನಿಮಾರಂಗ ಕೂಡ ತುಂಬಾ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಇದೆಲ್ಲಾ ಸರಿಹೋಗಲಿ ಎಂದು ಆಶಿಸುತ್ತೇವೆ.

   ಅಭಿಷೇಕ್ ಕೂಡ ದರ್ಶನ್‌ನ ಜೈಲಿನಲ್ಲಿ ಮಾತ್ರ ಭೇಟಿ ಮಾಡಿದ್ದಾನೆ. ಈ ಎಲ್ಲದರಿಂದ ದರ್ಶನ್ ಗೆದ್ದು ಬರಬೇಕು. ದರ್ಶನ್ ಕನ್ನಡ ಚಿತ್ರರಂಗಕ್ಕೆ ಬಿಗ್ಗೇಸ್ಟ್ ಪಿಲ್ಲರ್. ಕಳೆದ ವರ್ಷ ಅವರು ಕಾಟೇರ ಹಿಟ್ ಕೊಟ್ಟಿದ್ದಾರೆ. ಅವರು ಇಲ್ಲದೆ ನಿರ್ಮಾಪಕರು ಎಲ್ಲರೂ ಗೊಂದಲದಲ್ಲಿ ಇದ್ದಾರೆ. ಇಂತಹ ನಟನಿಗೆ ಆದಂತಹ ತೊಂದರೆಯಿಂದ ಇಡೀ ಚಿತ್ರರಂಗಕ್ಕೆ ಶಿಕ್ಷೆ ಆಗುತ್ತಿದೆ. ಈ ಕೊಲೆ ಪ್ರಕರಣ ವಿಚಾರ ಎಲ್ಲರಿಗೂ ನೋವಾಗಿದೆ. ದರ್ಶನ್ ಹೇಗೆ ಅಂತ ನನಗೆ ಗೊತ್ತು. ಅವರು ಒಳ್ಳೆಯ ಗುಣಗಳು ಇರುವ ವ್ಯಕ್ತಿ. ಅವರೀಗ ನೋವು ಅನುಭವಿಸುತ್ತಿದ್ದಾರೆ ಎಂದರು.

Recent Articles

spot_img

Related Stories

Share via
Copy link