ನವದೆಹಲಿ:
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ನನ್ನ ಸಂಪೂರ್ಣ ಬೆಂಬಲ ಇದೆ. ಯಾವುದೇ ಒಳಸಂಚು ಮಾಡುವುದಿಲ್ಲ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿ ಬಿಜೆಪಿ ವರಿಷ್ಠರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಎಂದು ಯಾರೂ ಕೇಳಿಲ್ಲ. ವರಿಷ್ಠರು ಏನು ಹೇಳುತ್ತಾರೋ ಅದರಂತೆ ನಡೆಯುತ್ತೇನೆ. ನಿಖಿಲ್ ಸ್ಪರ್ಧೆ ಮಾಡುವುದಾದರೇ ನನ್ನ ಸಂಪೂರ್ಣ ಬೆಂಬಲ ಇದೆ.
ನಾನು ಯಾವುದೇ ಒಳಸಂಚು ಮಾಡುವುದಿಲ್ಲ. ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ. ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಅವರೇ ಬಹುಪಾಲು ನಿರ್ಣಯ ಮಾಡುತ್ತಾರೆ. ಅವರ ಆಶೀರ್ವಾದ ಬೇಕೇಬೇಕು ಎಂದರು.
ಕಾಂಗ್ರೆಸ್ ಪಕ್ಷದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬದವರೇ ನಿಲ್ಲುತ್ತಾರೆ ಎಂಬುದು ನಮ್ಮ ಅಭಿಪ್ರಾಯ. ಡಿಕೆಶಿ ಕುಟುಂಬದವರು ನಿಂತರೆ ದೊಡ್ಡ ಹೋರಾಟ ನಡೆಯಲಿದೆ ಎಂದರು.
