ಬಾರ್ಬಡೋಸ್:
ಆಸ್ಟ್ರೇಲಿಯ ವಿರುದ್ಧದ ತವರಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ತಪ್ಪಿಗೆ ವೆಸ್ಟ್‌ಇಂಡೀಸ್ ತಂಡದ ವೇಗದ ಬೌಲರ್ ಜೇಡನ್ ಸೀಲ್ಸ್ ಅವರಿಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದೆ. ಕೆನ್ಸಿಂಗ್‌ಟನ್ ಓವಲ್‌ನಲ್ಲಿ ನಡೆದ ಪಂದ್ಯದ ವೇಳೆ ಸೀಲ್ಸ್ ಅವರು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ರನ್ನು ಔಟ್ ಮಾಡಿದ ಬಳಿಕ ಡ್ರೆಸ್ಸಿಂಗ್ ರೂಮ್‌ಗೆ ತೆರಳುವಂತೆ ಸನ್ನೆ ಮಾಡುವ ಸಂಭ್ರಮಾಚರಣೆ ಮಾಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಔಟಾದ ಬ್ಯಾಟ್ಸ್‌ಮನ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆಯ ಸನ್ನೆಗಳನ್ನು ಮಾಡುವುದು ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಸೀಲ್ಸ್ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ. ಸೀಲ್ಸ್ ದಂಡದ ಜತೆಗೆ ಒಂದು ಡಿಮೆರಿಟ್ ಪಾಯಿಂಟ್ ಪಡೆದರು. 24 ತಿಂಗಳಲ್ಲಿ 2ನೇ ಬಾರಿ ಈ ತಪ್ಪು ಎಸಗಿದ್ದರು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ಪಂದ್ಯದಲ್ಲಿ 159 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡದೆ. ಮೊದಲ ಇನಿಂಗ್ಸ್‌ನಲ್ಲಿ 180 ರನ್‌ಗೆ ಕುಸಿದಿದ್ದ ಆಸೀಸ್ ದ್ವಿತೀಯ ಇನಿಂಗ್ಸ್‌ನಲ್ಲಿ 310 ರನ್ ಬಾರಿಸಿತು. 10 ರನ್ ಮುನ್ನಡೆಯೊಂದಿಗೆ ಗುರಿ ಬೆನ್ನಟ್ಟಿದ ವಿಂಡೀಸ್ 141 ರನ್‌ಗೆ ಸರ್ವಪತನ ಕಂಡು ಸೋಲು ಕಂಡಿತು. ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಕಿತ್ತು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸೋಲಿನಿಂದ ಶಮರ್ ಜೋಸೆಫ್ ಅವರ ಒಟ್ಟು 9 ವಿಕೆಟ್ ಬೇಟೆ ವ್ಯರ್ಥವಾಯಿತು. ದ್ವಿತೀಯ ಟೆಸ್ಟ್ ಜುಲೈ 3ರಿಂದ ಆರಂಭಗೊಳ್ಳಲಿದೆ. ಸರಣಿಯನ್ನು ಜೀವಂತವಿರಿಸಬೇಕಿದ್ದರೆ ವಿಂಡೀಸ್‌ಗೆ ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಅಗತ್ಯ.








