ನವದೆಹಲಿ :
ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ರಂಪ ಮುಂದುವರೆದಿದೆ. ಒಂದೆಡೆ ಭಾರತ ಪಾಕ್ನಲ್ಲಿ ಟೂರ್ನಿ ಆಡಲು ನಿರಾಕರಿಸಿದರೆ, ಮತ್ತೊಂದೆಡೆ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಹಿಂದೇಟು ಹಾಕಿದೆ. ಈ ಎರಡು ಕ್ರಿಕೆಟ್ ಮಂಡಳಿಗಳ ನಿರ್ಧಾರದಿಂದ ಇದೀಗ ಐಸಿಸಿ ಸಂಕಷ್ಟಕ್ಕೆ ಸಿಲುಕಿದೆ. ಇದಾಗ್ಯೂ ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸಲು ಅನುವು ಮಾಡಿಕೊಡುವುದಾಗಿ ತಿಳಿಸಿರುವ ಐಸಿಸಿ, ಭಾರತಕ್ಕಾಗಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ತಿಳಿಸಿದೆ.
ಐಸಿಸಿ ಅಧಿಕಾರಿಗಳು ಮುಂದಿನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ ಭಾರತವಿಲ್ಲದೆ ಟೂರ್ನಿ ಆಯೋಜಿಸಿದರೆ ಉಂಟಾಗುವ ನಷ್ಟವನ್ನು ಮತ್ತು ಅದರಿ ಪರಿಣಾಮವನ್ನು ಪಿಸಿಬಿ ಅಧಿಕಾರಿಗಳಿಗೆ ವಿವರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೈಬ್ರಿಡ್ ಮಾದರಿಯೊಂದೇ ಪ್ರಸ್ತುತ ಆಯ್ಕೆ ಎಂದು ಐಸಿಸಿ ತಿಳಿಸಿದೆ.
ಚಾಂಪಿಯನ್ಸ್ ಟ್ರೋಫಿ ಕುರಿತಾದ ತನ್ನ ನಿಲುವನ್ನು ಬಿಸಿಸಿಐ ಐಸಿಸಿಗೆ ತಿಳಿಸಿದೆ. ಆದರೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಸೇರಿದಂತೆ, ಕೆಲ ಅಧಿಕಾರಿಗಳು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.
ಇಂತಹ ಹೇಳಿಕೆಗಳಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣವಾಗಲಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಎಚ್ಚರಿಸಿದೆ. ಹೀಗಾಗಿ ಯಾವುದೇ ಹೇಳಿಕೆ ನೀಡದೇ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಸಿದ್ಧತೆಗಳನ್ನು ಶುರು ಮಾಡಬೇಕೆಂದು ಪಿಸಿಬಿಗೆ ಐಸಿಸಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು. ಹೀಗೆ ಒಂದು ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸುವುದನ್ನು ಹೈಬ್ರಿಡ್ ಮಾದರಿ ಎನ್ನಲಾಗುತ್ತದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕೆಂದು ಬಿಸಿಸಿಐ ಬೇಡಿಕೆಯಿಟ್ಟಿದೆ. ಏಕೆಂದರೆ 2023 ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕ್ ಕ್ರಿಕೆಟ್ ಮಂಡಳಿ ಬಳಿಯಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನೂ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಿಸಿಸಿಐ ಐಸಿಸಿಗೆ ತಿಳಿಸಿದೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನ್ ಮತ್ತು ಯುಎಇ ನಲ್ಲಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.