550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಸಂಚಾರ ರದ್ದು; ಊಟ, ನೀರಿಲ್ಲದೆ ಪ್ರಯಾಣಿಕರ ಪರದಾಟ

ನವದೆಹಲಿ

   ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ದಲ್ಲಿ ಅವ್ಯವಸ್ಥೆ ಮುಂದುವರೆದಿದ್ದು, 550 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ರದ್ದತಿಯಿಂದ 12 ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಕರು ಆಹಾರ, ನೀರಿಲ್ಲದೆ ಪರದಾಡಿದ ಘಟನೆ ನಡೆದಿದೆ. ಸತತ ಮೂರನೇ ದಿನವೂ ಈ ಸಮಸ್ಯೆ ಮುಂದುವರಿದಿದ್ದು, ನೂರಾರು ಪ್ರಯಾಣಿಕರ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಿದೆ.

    550 ವಿಮಾನಗಳ ರದ್ದತಿಯಲ್ಲಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 172 ವಿಮಾನಗಳು ರದ್ದಾದವು, ನಂತರ ಮುಂಬೈನಲ್ಲಿ 118, ಬೆಂಗಳೂರಿನಲ್ಲಿ 100, ಹೈದರಾಬಾದ್‌ನಲ್ಲಿ 75, ಕೋಲ್ಕತ್ತಾದಲ್ಲಿ 35, ಚೆನ್ನೈನಲ್ಲಿ 26 ಮತ್ತು ಗೋವಾದಲ್ಲಿ 11 ವಿಮಾನಗಳು ರದ್ದಾದವು. ದೇಶಾದ್ಯಂತದ ಇತರ ವಿಮಾನ ನಿಲ್ದಾಣಗಳಲ್ಲಿಯೂ ಸಹ ರದ್ದತಿ ವರದಿಯಾಗಿದೆ.ಇಂಡಿಗೋದಿಂದ “ಮಾನಸಿಕ ಹಿಂಸೆ” ಎಂದು ಕರೆದ ಪ್ರಯಾಣಿಕನೊಬ್ಬ, 12 ಗಂಟೆಗಳ ನಂತರವೂ ವಿಮಾನಯಾನ ಸಂಸ್ಥೆಗಳಿಂದ ಯಾವುದೇ ಸ್ಪಷ್ಟೀಕರಣ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. 

   “ನಾನು 12 ಗಂಟೆಗಳಿಗೂ ಹೆಚ್ಚು ವಿಮಾನ ನಿಲ್ದಾಣದಲ್ಲೇ ಇದ್ದೇನೆ. ಪ್ರತಿ ಬಾರಿಯೂ ಅವರು ನಮಗೆ ಒಂದು ಗಂಟೆ ವಿಳಂಬ, ಎರಡು ಗಂಟೆ ವಿಳಂಬ ಎಂದು ಹೇಳುತ್ತಿದ್ದಾರೆ. ವಿಚಾರಿಸಿದರೆ ಇಂಡಿಗೋ ಸಿಬ್ಬಂದಿ ನಮಗೆ ಏನನ್ನೂ ಹೇಳುತ್ತಿಲ್ಲ. ಟಿಕೆಟ್‌ ಬುಕ್ಕಿಂಗ್‌ ಆಕೆ ಮಾಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಪ್ರಯಾಣಿಕರೊಬ್ಬರು ಮಾಧ್ಯಮದ ಜತೆ ಮಾತನಾಡುವವಾಗ ಹೇಳಿದರು.

    ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ‘ವಿಮಾನ ಕೆಲಸದ ಸಮಯದ ಮಿತಿಗಳು’ ಎಂಬ (ಎಫ್‌ಡಿಟಿಎಲ್‌) ಹೊಸ ನಿಯಮವನ್ನು ನ.1ರಿಂದ ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಓರ್ವ ಸಿಬ್ಬಂದಿ ದಿನಕ್ಕೆ 8 ಗಂಟೆ, ವಾರಕ್ಕೆ 35 ಗಂಟೆ, ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ 1,000 ಗಂಟೆಗಳ ಹಾರಾಟ ಮಾತ್ರ ನಡೆಸಬೇಕು. ವಾರದಲ್ಲಿ 2 ಬಾರಿಯಷ್ಟೇ ರಾತ್ರಿ ವೇಳೆ ಪೈಲಟ್‌ ವಿಮಾನವನ್ನು ಲ್ಯಾಂಡ್‌ ಮಾಡಬಹುದು. ಎಫ್‌ಡಿಟಿಎಲ್‌ ಅಳವಡಿಕೆಯಿಂದಾಗಿ ಪೈಲಟ್‌ಗಳ ಕೆಲಸದ ಅವಧಿಗೆ ಹೊಸ ಮಿತಿ ಹೇರಲಾಗಿದ್ದು, ಇಂಡಿಗೋ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಜತೆಗೆ, 2 ವರ್ಷಗಳಿಂದ ಹೊಸ ನೇಮಕಾತಿಗಳನ್ನು ಮಾಡಿಕೊಂಡಿಲ್ಲವಾದ ಕಾರಣ, 2,300 ವಿಮಾನಗಳನ್ನು ಹೊಂದಿರುವ ಸಂಸ್ಥೆಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

    ಹಲವು ಇಂಡಿಗೋ ವಿಮಾನಗಳು ರದ್ದಾದ ಕಾರಣ, ಏರಿಂಡಿಯಾ ಸೇರಿದಂತೆ ಅನ್ಯ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರಗಳು ಕೊನೆ ಕ್ಷಣದಲ್ಲಿ ಭಾರೀ ದುಬಾರಿಯಾಗಿವೆ. ದೆಹಲಿ ಹಾಗೂ ಮುಂಬೈ ಮಾರ್ಗವಾಗಿ ಸಾಗುವ ವಿಮಾನಗಳಲ್ಲಿ ಎಕಾನಮಿ ಸೀಟ್‌ಗೆ 1.03 ಲಕ್ಷ ರು. ಮತ್ತು ಬಿಸ್ನೆಸ್‌ ಕ್ಲಾಸ್‌ಗೆ 1.3 ಲಕ್ಷ ರು. ಆಗಿದೆ. ಅತ್ತ ವಿಶಾಖಪಟ್ಟಣಂ ವಿಮಾನದ ಎಕಾನಮಿ ದರ 69,787 ರು. ಆಗಿದ್ದರೆ, ಭುವನೇಶ್ವರಕ್ಕೆ 27,417 ರು. ಆಗಿತ್ತು.

Recent Articles

spot_img

Related Stories

Share via
Copy link