ಬೆಂಗಳೂರು:
ಬೆಂಗಳೂರಿನ ತಿನಿಸುಪ್ರಿಯರು ಬೆಚ್ಚಿಬೀಳುವಂತ ಸುದ್ದಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಬೆಂಗಳೂರಿನ ಹಲವಾರು ಹೋಟೆಲ್‌ಗಳು, ಈಟರಿಗಳಲ್ಲಿ ನೀಡಲಾಗುತ್ತಿರುವ ಇಡ್ಲಿಗಳಲ್ಲೂ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ. ಈ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಪಾನಿಪುರಿಗಳ ಪರಿಶೀಲನೆಯನ್ನೂ ಹೀಗೇ ನಡೆಸಿ ಅವುಗಳಲ್ಲಿ ಕ್ಯಾನ್ಸರ್‌ಕಾರಕ ವಿಷವಿರುವ ಆಘಾತಕಾರಿ ವಿಷಯವನ್ನು ಇಲಾಖೆ ಬಹಿರಂಗಪಡಿಸಿತ್ತು.
ಇಡ್ಲಿಯನ್ನು ಬೇಯಿಸಲು ಬಳಸಲಾಗುವ ಸ್ಟೀಮರ್‌ಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಹೊಮ್ಮುತ್ತಿವೆ. ಹೀಗಾಗಿ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವ ಆಹಾರ ಮಳಿಗೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 254 ತಿನಿಸುಗಳ ತಪಾಸಣೆ ನಡೆಸಲಾಗಿದ್ದು, 24 ತಿನಿಸು ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಕರ್ನಾಟಕದಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ವ್ಯಾಪಾರಿಗಳ ತಪಾಸಣೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳ ನಂತರ ಫೆಬ್ರವರಿ 14, 2025 ರಂದು ಈ ಸಂಬಂಧ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 35ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದು, ರಸ್ತೆಬದಿಯ ಇಡ್ಲಿ ಖರೀದಿಸಿ ತಿನ್ನುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ.
ಅತಿ ಹೆಚ್ಚಿನ ತಾಪಮಾನಕ್ಕೆ ಒಳಗಾದ ಪ್ಲಾಸ್ಟಿಕ್‌ನಿಂದ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಪ್ಲಾಸ್ಟಿಕ್ ಹಾಳೆಗಳಲ್ಲಿ ಇಡ್ಲಿಗಳನ್ನು ಬೇಯಿಸುವುದು ಆರೋಗ್ಯಕ್ಕೆ ಹಾನಿಕಾರಕ. ಏಕೆಂದರೆ ಪ್ಲಾಸ್ಟಿಕ್ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಪ್ಲಾಸ್ಟಿಕ್ ಅನ್ನು ಅಡುಗೆಗಾಗಿ ವಿನ್ಯಾಸಗೊಳಿಸದ ಕಾರಣ, ಶಾಖವು ಅದನ್ನು ಒಡೆಯಲು ಮತ್ತು ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್‌ಗಳಂತಹ ಹಾನಿಕಾರಕ ವಸ್ತುಗಳನ್ನು ಆಹಾರಕ್ಕೆ ಸೋರಿಕೆ ಮಾಡಲು ಕಾರಣವಾಗಬಹುದು.
ಈ ರಾಸಾಯನಿಕಗಳು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತವೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳು, ಬೆಳವಣಿಗೆಯ ಅಸ್ವಸ್ಥತೆಗಳು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯಗಳನ್ನು ಒಳಗೊಂಡಂತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ಲಾಸ್ಟಿಕ್ ಹಾಳೆಗಳೊಂದಿಗೆ ನೇರ ಸಂಪರ್ಕದಲ್ಲಿ ಆಹಾರವನ್ನು ಬೇಯಿಸಿದಾಗ, ಈ ಹಾನಿಕಾರಕ ವಸ್ತುಗಳು ಆಹಾರಕ್ಕೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗುತ್ತದೆ, ಇದು ಗ್ರಾಹಕರ ಆರೋಗ್ಯಕ್ಕೆ ಗಂಭೀರ ಅಪಾಯಗಳನ್ನುಂಟು ಮಾಡುತ್ತದೆ.
ರಾಸಾಯನಿಕ, ಕೃತಕ ಬಣ್ಣಗಳನ್ನು ಬಳಸುವ ಕಾರಣ ಗೋಬಿ ಮಂಚೂರಿ, ಪಾನಿಪುರಿ ಹಾಗೂ ಇನ್ನಿತರ ಫಾಸ್ಟ್ ಫುಡ್ ಐಟಂಗಳು ಅವುಗಳನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಉಂಟು ಮಾಡಬಲ್ಲವು ಎಂದು ಈ ಹಿಂದೆ ಆಹಾರ ಇಲಾಖೆ ಅವುಗಳ ವಿರುದ್ಧ ಕ್ರಮ ಕೈಗೊಂಡಿತ್ತು. ರಾಸಾಯನಿಕ, ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿತ್ತು. ಇದೀಗ ಅನೇಕರ ನೆಚ್ಚಿನ ಆಹಾರ ಇಡ್ಲಿಯ ಬಗ್ಗೆಯೂ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇನ್ನೂ ನೂರಾರು ಇಡ್ಲಿ ಸ್ಯಾಂಪಲ್ಸ್ ವರದಿಗೆ ಕಾಯಲಾಗುತ್ತಿದೆ. ಪೂರ್ಣ ವರದಿ ಕೈಸೇರಿದ ಬಳಿಕ ಪ್ಲಾಸ್ಟಿಕ್ ಪೇಪರ್ ನಿಷೇಧಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.