ರಾಜೇಂದ್ರ ಗೆದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಂತೆ

ತುಮಕೂರು:


ಬಿಜೆಪಿ-ಜೆಡಿಎಸ್ ಒಳಮೈತ್ರಿ ಪರಮೇಶ್ವರ್ ಆರೋಪ

  ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವು ಅದು ಅವರ ವೈಯಕ್ತಿಕ ಗೆಲುವಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಂತೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಬಣ್ಣಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರ ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಮುಂಭಾಗ ಕಾರ್ಯಕರ್ತರು, ಸ್ಥಳೀಯಸಂಸ್ಥೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಅತ್ಯಂತ ಪ್ರಾಮುಖ್ಯವಾಗಿದ್ದು, ಕಳೆದ ಬಾರಿ ಅನೇಕ ಕಾರಣಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗಿಲ್ಲ. ಈ ಬಾರಿ ರಾಜೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಪರಿಷತ್ ಫಲಿತಾಂಶ ದಿಕ್ಸೂಚಿಯಾಗುವಂತೆ ಸ್ಥಳೀಯ ಸಂಸ್ಥೆ,ಗ್ರಾಮ ಪಂಚಾಯಿತಿ ಸದಸ್ಯರು ಮಾಡಬೇಕು ಎಂದರು.

ಜೆಡಿಎಸ್ -ಬಿಜೆಪಿಯವರು ಒಳಮೈತ್ರಿ ಮಾಡಿಕೊಂಡಿರುವುದಕ್ಕೆ 25 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿ ಹಾಕಿರುವುದು ಸಾಕ್ಷಿಯಾಗಿದೆ. ಬಿಜೆಪಿಗೆ ಅನುಕೂಲವಾಗಲೆಂದು ಜೆಡಿಎಸ್‍ನವರು ಈರೀತಿ ಮಾಡಿದ್ದು, ತುಮಕೂರು ಕ್ಷೇತ್ರದಲ್ಲೂ ಹಣಬಲವುಳ್ಳವರನ್ನು ಜೆಡಿಎಸ್- ಬಿಜೆಪಿಯವರು ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಅಭ್ಯರ್ಥಿಗಳ್ಯಾರೆಂಬುದೇ ನಮಗೆ ತಿಳಿದಿಲ್ಲ. ಇನ್ನೂ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಅನುದಾನವನ್ನು ಬಿಜೆಪಿ ಸರಕಾರ ವಾಪಸ್ ಪಡೆದಿದ್ದು, ಪಂಚಾಯಿತಿಗಳ ಸಬಲೀಕರಣಕ್ಕೆ ಒತ್ತುಕೊಡುತ್ತಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ 150 ಕೋಟಿ ಅನುದಾನ ವಾಪಸ್ ಪಡೆಯಲಾಗಿದೆ. ಬಿಜೆಪಿ ಅಭ್ಯರ್ಥಿ ಕೊರಟಗೆರೆ ಮೂಲದವರೆನ್ನುತ್ತಾರೆ.

ಆಕ್ಷೇತ್ರದ ಶಾಸಕನಾಗಿ ನಾನು ಒಮ್ಮೆಯೂ ಕಂಡಿಲ್ಲ. ಇಂತಹ ಬಿಜೆಪಿಯವರಿಗೆ ಪಂಚಾಯ್ತಿ ಸದಸ್ಯರು ಮತಹಾಕಬೇಕೇ? ಪಕ್ಷದ ಮುಖಂಡರು ಪಂಚಾಯ್ತಿ ಸದಸ್ಯರ ಪ್ರತೀ ಮನೆ ಮನೆಗೆ ತೆರಳಿ ಈ ಬಗ್ಗೆ ಮನವರಿಕೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಬೇಕು ಎಂದು ಕರೆಕೊಟ್ಟರು.ರಾಜ್ಯದಲ್ಲೇ ಆಡಳಿತ ಇದೆಯೋ ಇಲ್ಲವೋ ಎಂಬುದು ತಿಳಿಯದಂತಾಗಿದ್ದು, ಮಳೆಯಿಂದ11 ಲಕ್ಷ ಎಕರೆ ಬೆಳೆನಾಶವಾಗಿ 1ಲಕ್ಷ ಕೋಟಿ ನಷ್ಟವಾಗಿದೆ. ಪರಿಹಾರ ಕ್ರಮದ ಬಗ್ಗೆ ಸರಕಾರ ಗಮನಹರಿಸುತ್ತಿಲ್ಲ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಸರ್ವಾನುಮತದ ಅಭ್ಯರ್ಥಿ:

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ ರಾಜೇಂದ್ರ ಅವರು ಕಾಂಗ್ರೆಸ್ ಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿ ಘೋಷಿತವಾದ ಅಭ್ಯರ್ಥಿಯಾಗಿದ್ದು,ಯುವ ನಾಯಕನಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದು. ಈ ಬಾರಿ ಅವರನ್ನು ಮೇಲ್ಮನೆಗೆ ಕಳುಹಿಸುವುದು ನಮ್ಮೆಲ್ಲ ಕಾಂಗ್ರೆಸ್‍ಪಕ್ಷದ ಸ್ಥಳೀಯ ಸಂಸ್ಥೆ ಸದಸ್ಯರು ಮುಖಂಡರ ಗುರಿಯಾಗಬೇಕು ಎಂದರು.

ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರು ಬಿಜೆಪಿ ಆಡಳಿತದ ಕಂಡು ಜನಸಾಮಾನ್ಯರು, ಪಂಚಾಯಿತಿ ಸದಸ್ಯರು ರೋಸಿಹೋಗಿದ್ದು, ಈ ಅಸಮಾಧಾನಗಳು ಮತವಾಗಿ ರಾಜೇಂದ್ರ ಅವರ ಗೆಲುವಿಗೆ ಕಾರಣವಾಗಬೇಕು. ಜಾತಿ,ಮತ,ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಬಿಜೆಪಿಯವರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದರು.

ಜಿಪಂಮಾಜಿ ಸದಸ್ಯ ಎಚ್.ವೆಂಕಟೇಶ್ ಮಾತನಾಡಿ ಪಾವಗಡ ಚುನಾವಣಾ ಉಸ್ತುವಾರಿಯನ್ನು ನಾನು ಹೊತ್ತಿಕೊಂಡಿದ್ದು, ಆ ಭಾಗದಿಂದ 300ಕ್ಕೂ ಅಧಿಕ ಮತ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿಸುವ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು. ಮಾಜಿ ಸಚಿವ ವೆಂಕಟರವಣಪ್ಪ, ಮಾಜಿ ಶಾಸಕರಾದ ಎಸ್.ಷಡಾಕ್ಷರಿ, ಎಸ್.ಷಫಿ ಅಹಮದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಠೆ, ರಾಯಸಂದ್ರ ರವಿಕುಮಾರ್ ಸೇರಿ ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಮುಖಂಡರು,ಸ್ಥಳೀಯ ಸಂಸ್ಥೆ ಸದಸ್ಯರು ಹಾಜರಿದ್ದರು.

ನೀವೇ ರಾಜೇಂದ್ರರಾಗಿ ಗೆಲುವಿಗೆ ಹೋರಾಡಿ: ಕೆಎನ್‍ಆರ್

ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಕಾಂಗ್ರೆಸ್ ಅಭ್ಯರ್ಥಿಯಷ್ಟೇ. ಮತಪ್ರಚಾರದಲ್ಲಿ ನೀವೇರಾಜೇಂದ್ರರಾಗಿ ಪಂಚಾಯಿತಿ ಸದಸ್ಯರು ಭೇಟಿಯಾಗಿ ಮತಯಾಚಿಸಬೇಕು. ಮುಂದಿನ ವಿಧಾನಸಭೆ,ಲೋಕಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ರಾಜೇಂದ್ರ ಉಮೇದುವಾರಿಕೆ ಸಲ್ಲಿಸಿದ ಬಳಿಕ ಡಿಸಿ ಕಚೇರಿ ಹೊರಗಡೆ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ ಸ್ಥಳೀಯಸಂಸ್ಥೆ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್, ಎಚ್.ವೆಂಕಟೇಶ್, ಇಕ್ಬಾಲ್ ಅಹಮದ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link