ಸಾಗುವಳಿ ಭೂಮಿ ಒಕ್ಕಲೆಬ್ಬಿಸಿದರೆ ಮರಕ್ಕೆ ಕಟ್ಟಿಸುತ್ತೇನೆ

ಗುಬ್ಬಿ:


 ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿ

    ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ರೈತರ ಸಾಗುವಳಿ ಭೂಮಿಯನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಕೈ ಹಾಕಿದರೆ ಸ್ವತಃ ನಾನೇ ಮುಂದೆ ನಿಂತು ಅಧಿಕಾರಿಗಳನ್ನು ರೈತರಿಂದ ತೆಂಗಿನಮರಕ್ಕೆ ಕಟ್ಟಿಹಾಕಿಸಿ ಪೊಲೀಸ್ ಠಾಣೆಗೆ ದೂರು ಕೊಡಿಸುತ್ತೇನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.

ಪಟ್ಟಣದ ತಾಪಂ ಆವರಣಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಅರಣ್ಯ ಅಧಿಕಾರಿಗಳನ್ನು ಶಾಸಕರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಸೂಕ್ತ ದಾಖಲೆ ಇಲ್ಲ :

ರಂಗನಹಳ್ಳಿ ಸರ್ವೆ ನಂ 7 ರಲ್ಲಿ ಸುಮಾರು 40 ವರ್ಷಗಳಿಂದ 35 ಜನ ರೈತರು ಭೂ ಸಾಗುವಳಿ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ.

ಸುಮಾರು 40 ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಅರಣ್ಯ ಪ್ರದೇಶವೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ದಾಖಲಾತಿ ಇಲ್ಲದೆ ಒಕ್ಕಲೆಬ್ಬಿಸುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಶಾಸಕರು ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪನವರ ಮೇಲೆ ರೇಗಿದರು.

ರೈತರ ಖಾತೆಗೆ ಪರಿಹಾರ :

ಸಭೆಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಕೃಷಿ ಸಹಾಯಕ ನಿರ್ದೇಶಕರು ಮಾತನಾಡಿ, ತಾಲ್ಲಕಿನಲ್ಲಿ 1,264 ಹೆಕ್ಟೇರ್ ರಾಗಿ ಬೆಳೆ ಹಾಳಾಗಿದ್ದು, ಸರ್ಕಾರದಿಂದ ಬರುವ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗಿದೆ.

ಕಡಬ ಕೆರೆಯು ತುಂಬಿದ್ದು ಹಿನ್ನಿರಿನಿಂದ ಬೆಳೆಯುವ ಭತ್ತದ ಬಿತ್ತನೆ ಬೀಜವನ್ನು ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದರು.

ಇಂಜಿನಿಯರ್‍ಗೆ ಎಚ್ಚರಿಕೆ :

ಗ್ರಾಮೀಣ ರಸ್ತೆ ಕಾಮಗಾರಿ ಕುರಿತು ಜಿಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಪ್ರಶ್ನಿಸಿದ ಶಾಸಕರು, ಹೊಸ ರಸ್ತೆಯು ನಿರ್ಮಿಸಿದ 3 ದಿನಗಳ ನಂತರ ಹದಗೆಟ್ಟಿದೆ.

ಸರ್ಕಾರದ ಹಣ ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಪ್ರತಿ ಹಂತದಲ್ಲೂ ಪರೀಕ್ಷಿಸಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ಇಂಜಿನಿಯರ್‍ಗೆ ಎಚ್ಚರಿಸಿದರು.

ಎಫ್‍ಐಆರ್ ಹಾಕಿದ್ದೇವೆ ಎಂದು ಹೇಳಿ :

ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಮಾತನಾಡಿದ ಶಾಸಕರು, ಪ್ರತಿ ಗ್ರಾಮದಲ್ಲೂ 3-4 ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ತನ್ನದೇ ಸ್ವಂತ ಊರಾದ ಮಣ್ಣಮ್ಮದೇವಿ ದೇವಾಲಯದ ಬಳಿ ಇರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದೆ.

ಅಬಕಾರಿ ಇಲಾಖೆಯ ಸಿಬ್ಬಂದಿ ನಿದ್ದೆ ಮಾಡುತ್ತಿದ್ದಾರೆಯೆ? ಎಂದು ಸಿಡಿದ ಶಾಸಕರು, ಮದ್ಯ ಮಾರಾಟಗಾರರನ್ನು ಅಬಕಾರಿ ಅಧಿಕಾರಿಗಳು ಹಿಡಿದಾಗ ನನ್ನ ಮೊಬೈಲ್‍ಗೆ ಕರೆಗಳು ಬರುತ್ತವೆ, ಆಗ ಅಧಿಕಾರಿಗಳು ಈಗಾಗಲೇ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ಹೇಳಿ ಅಕ್ರಮ ಮದ್ಯ ಮರಾಟಗಾರರ ಮೇಲೆ ದೂರು ದಾಖಲಿಸುವಂತೆ ಸೂಚಿಸಿದರು.

174 ಅಬಕಾರಿ ಕೇಸ್ :

ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಇಲಾಖೆಯ ಅಧಿಕಾರಿ, ಈಗಾಗಲೇ ಏಪ್ರಿಲ್‍ನಿಂದ ಇಲ್ಲಿಯವೆರಗೂ 174 ಕೇಸ್‍ಗಳನ್ನು ಹಾಕಲಾಗಿದ್ದು, 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸಾಗಿಸುತ್ತಿದ್ದವರನ್ನು ಬಂಧಿಸಿ, 3.876 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ ಒಟ್ಟು 181 ಕೇಸ್‍ಗಳನ್ನು ದಾಖಲಿಸಿರುವುದಾಗಿ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ಬಿಸಿಯೂಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಶಾಸಕರು :

ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟದ ಪಡಿತರದಲ್ಲಿ ಹುಳುಗಳು ಬಿದ್ದಿರುವ ಸುದ್ದಿಯನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ನೋಡಿದ ನಂತರ ಬಿಸಿಯೂಟ ಅಧಿಕಾರಿ ಎಚ್ಚೆತ್ತುಕೊಂಡಿರುವುದು ಎಷ್ಟು ಸಮಂಜಸ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು,

ಅಕ್ಷರ ದಾಸೋಹ ಅಧಿಕಾರಿಯು ಆಹಾರ ಧಾನ್ಯಗಳನ್ನು ಪರಿಶೀಲಿಸದೆ ಶಾಲೆಗಳಿಗೆ ವಿತರಣೆ ಮಾಡಿರುವುದು ತಮ್ಮ ಕೆಲಸಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಅಕ್ಷರ ದಾಸೋಹ ಪ್ರಭಾರ ನಿರ್ದೇಶಕ ಯೋಗಾನಂದ್ ಅವರಿಗೆ ಛೀಮಾರಿ ಹಾಕಿ, ಮಕ್ಕಳು ತಿನ್ನುವ ಆಹಾರಕ್ಕೂ ಕನ್ನಹಾಕ ಬೇಡಿ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.

        ರೈತರು ತಮ್ಮ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ತೆಂಗು, ಹುಣಸೆಗಿಡಗಳನ್ನು ಬೆಳೆಸಿರುವುದು ಅಧಿಕಾರಿಗಳ ಕಣ್ಣಿಗೆ  ಕಾಣಲಿಲ್ಲವೆ? ಅರಣ್ಯ ಇಲಾಖೆಯವರು ಈಗ ಒಕ್ಕಲೆಬ್ಬಿಸುವ ಹಂತಕ್ಕೆ ಹೋಗಲು ಕಾರಣವೇನು? ತಾಲ್ಲೂಕು ದಂಡಾಧಿಕಾರಿಗಳೆ ಭೂ ಒಡೆತನದ ಹಕ್ಕುಪತ್ರ ನೀಡಿದ್ದಾರೆ ಇದು ಸರ್ಕಾರವೇ ನೀಡಿದಂತಾಗುವುದಿಲ್ಲವೇ?

-ಎಸ್.ಆರ್.ಶ್ರೀನಿವಾಸ್, ಶಾಸಕರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link