ಚೆನ್ನೈ:
ತಮಿಳುನಾಡಿನ ಖ್ಯಾತ ದೇಗುಲದಲ್ಲಿ ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಅರ್ಚಕರು ಅಪಮಾನ ಮಾಡಿರುವ ಘಟನೆ ವರದಿಯಾಗಿದೆ. ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪದಿಂದ ಇಳಯರಾಜ ಅವರನ್ನು ಹೊರ ತಳ್ಳಲಾಗಿದೆ. “ಅವರು ಒಳಗೆ ಹೋಗುವಂತಿಲ್ಲ. ಹೇಗೆ ಹೋಗಲು ಸಾಧ್ಯ? ಅವರನ್ನು ಒಳಗೆ ಬಿಡಬಾರದು” ಎಂದು ಅರ್ಚಕರು ಘೋಷಣೆಗಳನ್ನು ಕೂಗಿ ಕೋಲಾಹಲ ಸೃಷ್ಟಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು(ಡಿ.16) ಮುಂಜಾನೆ ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪದಿಂದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ಹೊರ ಹಾಕಿದ್ದರಿಂದ ಭಾರೀ ಗದ್ದಲ ಉಂಟಾಗಿದ್ದು, ಗರ್ಭಗುಡಿಯ ಹಿಂದಿನ ಸಭಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಅವರನ್ನು ತಡೆದು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ದೇಗುಲದ ಗರ್ಭಗುಡಿಯೊಳಗೆ ನಿರ್ದಿಷ್ಟ ಜಾತಿಯ ಕೆಲ ವರ್ಗದವರಿಗೆ ಮಾತ್ರ ಪ್ರವೇಶವಿದ್ದು, ಈ ಸಂದರ್ಭದಲ್ಲಿ ಇಳಯರಾಜ ಆಂಡಾಳ್ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದಾಗ ಕೆಲ ಭಕ್ತಾಧಿಗಳು ಸ್ವಾಗತ ಕೋರಿದ್ದಾರೆ. ಆದರೆ ದೇವಸ್ಥಾನದ ಅರ್ಚಕರು(ಜೀಯರ್) ಅವರನ್ನು ಹೊರಗೆ ತಡೆದು ನಿಲ್ಲಿಸಿ ಅವಮಾನ ಮಾಡಿದ್ದಾರೆ. ಇಳಯರಾಜ ಅರ್ಥ ಮಂಟಪದ ಮೆಟ್ಟಿಲುಗಳ ಬಳಿಯೇ ನಿಂತು ದೇವಸ್ಥಾನದ ಗೌರವ ಸ್ವೀಕರಿಸಿದ್ದು, ಪೂಜೆ ಸಲ್ಲಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ.
ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಲ್ಲಿರುವ ʼಶ್ರೀವಿಲ್ಲಿಪುತೂರ್ ಆಂಡಾಳ್ʼ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಇದು ಶ್ರೀ ವಿಷ್ಣುವಿಗೆ ಸಮರ್ಪಿತವಾದ ದೇಗುಲವಾಗಿದೆ. ಇದು ಇಬ್ಬರು ಆಳ್ವಾರರಾದ ಪೆರಿಯಾಜ್ವರ್ ಮತ್ತು ಅವರ ದತ್ತುಪುತ್ರಿ ಆಂಡಾಳ್ ಅವರ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಮಧುರೈನಿಂದ 80 ಕಿಮೀ ದೂರದಲ್ಲಿದ್ದು, ಪ್ರಾಚೀನ ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ.








