ನವದೆಹಲಿ:
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ರಾಜ್ಯಸಭಾ ಸಂಸದರೂ ಆದ ಇಳಯರಾಜ ಅವರು ಇತ್ತೀಚೆಗೆ ಲಂಡನ್‌ನಲ್ಲಿ ರಾಯಲ್ ಪಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ತಂಡದೊಂದಿಗೆ ಜಾಗತಿಕವಾಗಿ ಸಂಗೀತ ಮೇಳ ಕಾರ್ಯಕ್ರಮ ಪ್ರದರ್ಶನ ಕೈಗೊಂಡು ಇತಿಹಾಸ ಸೃಷ್ಟಿಸಿದ್ದರು. ಈ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಅದ್ಭುತವಾದ ಪ್ರಭಾವ ಬೀರುವ ಸಂಗೀತದ ದಿಗ್ಗಜ, ರಾಜ್ಯಸಭಾ ಸಂಸದ ಇಳಯರಾಜ ಅವರನ್ನು ಭೇಟಿಯಾದದ್ದು ಸಂತೋಷವಾಗಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಅವರು ಲಂಡನ್‌ನ ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಸಂಗೀತ ಸಾಧನೆಯ ಹಾದಿಯಲ್ಲಿ ಇದು ಮತ್ತೊಂದು ಅಧ್ಯಾಯ. ವಿಶ್ವಮಟ್ಟದಲ್ಲೇ ಸದ್ದು ಮಾಡುತ್ತಿದೆ” ಎಂದು ಪ್ರಧಾನಿ ಮೋದಿ ಇಳಯರಾಜ ಭೇಟಿ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಇಳಯರಾಜ ಅವರೂ ಕೂಡ ಸಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ಅವರು ಪ್ರಧಾನಿಯವರೊಂದಿಗೆ ಕೈಕುಲುಕುತ್ತಾ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಪ್ರಧಾನಿ ಮೋದಿ ಅವರ ಅವಿಸ್ಮರಣೀಯ ಎಂದು ಅವರು ಹೇಳಿದ್ದಾರೆ. ನಾವು ಸಿಂಫನಿ ವ್ಯಾಲಿಯಂಟ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.
ಮಾರ್ಚ್ 10 ರಂದು ಲಂಡನ್‌ನಿಂದ ಹಿಂದಿರುಗಿದ ಇಳಯರಾಜ ಅವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಲವಾರು ರಾಜಕೀಯ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಆತ್ಮೀಯ ಸ್ವಾಗತ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಇಳಯರಾಜ, ತಮ್ಮ ಬೆಂಬಲಿಗರಿಗೆ, ವಿಶೇಷವಾಗಿ ಲಂಡನ್‌ನಲ್ಲಿರುವ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
1976ರಲ್ಲಿ ಅನ್ನಕ್ಕಿಳಿ ಎಂಬ ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇಳಯರಾಜ ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. 82 ವರ್ಷದ ಇಳಯರಾಜ ಸದ್ಯ ವಿಶ್ವದಲ್ಲೂ ಸದ್ದು ಮಾಡುತ್ತಿದ್ದಾರೆ.
