ಲಕ್ನೋ:
ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹಾಗೂ ಪ್ರಿಯಕರ ಸಚಿನ್ ಮೀನಾ ಹಾಗೂ ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ ತನ್ನ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದೆ.
ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್ಜಿ ಆನ್ಲೈನ್ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪ್ರೇಮಾಂಕುರವಾಗಿತ್ತು. ಅದೇ ಕಾರಣಕ್ಕಾಗಿ ಆಕೆ, ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಳು. ಇದು ಭಾರೀ ಸುದ್ದಿಯಾಗಿತ್ತು.
ನಿನ್ನೆ ರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು. ಸಚಿನ್ ಮತ್ತು ಆತನ ತಂದೆ ನೇತ್ರಪಾಲ್ ಸಿಂಗ್ ಅವರನ್ನೂ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಂಸ್ಥೆಗಳ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಎಟಿಎಸ್, ಲಖನೌದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಶಂಕಿತ ಏಜೆಂಟ್ ಅನ್ನು ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಸ್ಥಳೀಯ ಪೊಲೀಸರು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಇನ್ನಷ್ಟೆ ಆರೋಪಪಟ್ಟಿ ಸಲ್ಲಿಸಬೇಕಾಗಿದೆ ಎಂದು ಅಧಿಕಾರಿ ಹೇಳಿದರು. ಪ್ರೀತಿಸಿದ ಯುವಕನ ಜೊತೆಗೆ ನೆಲೆಸುವ ಉದ್ದೇಶದಿಂದ ಸೀಮಾ ಹೈದರ್ ಪಾಕಿಸ್ತಾನ ತೊರೆದು ಭಾರತ ಪ್ರವೇಶಿಸಿದ್ದು, ಈ ಘಟನೆಯಲ್ಲಿ ‘ಪ್ರೀತಿ’ಯನ್ನು ಮೀರಿದ್ದೇನೂ ಇಲ್ಲ ಎಂದು ಪಾಕ್ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ವರದಿ ನೀಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
