ಮುಂದಿನ ಐದು ದಿನಗಳು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ : ಐಎಂಡಿ

ಬೆಂಗಳೂರು

  ಆರು ತಿಂಗಳ ಕಾಲ ಸುದೀರ್ಘವಾದ ಒಣಹವೆಯನ್ನು ಅನುಭವಿಸಿರುವ ರಾಜ್ಯದಲ್ಲಿ ಕಳೆದ ವಾರದದಿಂದ ಮಳೆ ಬಂದಿದ್ದು, ತಾಪಮಾನ ಸುಧಾರಿಸಿದೆ. ಬೆಂಗಳೂರಿನಲ್ಲಿಯೂ ಇತ್ತೀಚೆಗೆ ಎರಡು ದಿನಗಳ ಕಾಲ ಸುರಿದ ಮಳೆಗೆ ಬಿಸಿಲು ಕೊಂಚ ಕಡಿಮೆಯಾಗಿದೆ. ಮುಂದಿನ ಐದು ದಿನಗಳು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

   ಭಾರತದ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಭಾನುವಾರ ಕೂಡ ತೀವ್ರ ತಾಪಮಾನವಿತ್ತು. ಕೆಲವು ಪ್ರದೇಶಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು, ಒಡಿಶಾ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5 ರಿಂದ 7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 41.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಮೇ 5 ರಿಂದ ಮೇ 7 ರವರೆಗೆ ಮಧ್ಯ ಕರ್ನಾಟಕದ ಪ್ರದೇಶಗಳಲ್ಲಿ ಮಳೆಯಾಗಲಿದೆ. ಮೇ 6 ರಿಂದ ಮೇ 10 ರವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮುಂದಿನ ಎರಡು ವಾರಗಳ ಕಾಲ ಸಾಧಾರಣ ಮಳೆಯಾಗಲಿದೆ. ಇದರ ಜೊತೆಗೆ ಹಲವು ಕಡೆಗಳಲ್ಲಿ ಶಾಖದ ಅಲೆ ಹೆಚ್ಚಿರಲಿದೆ.

    ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ, ಮತ್ತಷ್ಟು ಭಾಗಗಳಲ್ಲಿ ತಾಪಮಾನ ಹೆಚ್ಚಲಿದೆ ಎಂದು ತಿಳಿಸಿದೆ. ಮೇ 7 ರ ಮಂಗಳವಾರ ಲೋಕಸಭಾ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿಯ ಬಗ್ಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನವು 42 ರಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

    ಹವಾಮಾನದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಸಿಗಾಳಿ ಎಚ್ಚರಿಕೆ ನೀಡಿದೆ. ಮೇ 7 ರಂದು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಆಲಿಕಲ್ಲು ಮಳೆ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ಹವಾಮಾನ ವೈಪರೀತ್ಯದ ಹೊರತಾಗಿಯೂ, ಈ ವಾರ ಪೂರ್ವದ ಹಲವಾರು ರಾಜ್ಯಗಳು ಮತ್ತು ದಕ್ಷಿಣ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. “ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ನಾವು ಈಶಾನ್ಯ ಭಾರತದಲ್ಲಿ ಮಧ್ಯಮ ಚಂಡಮಾರುತ ಮತ್ತು ಆಲಿಕಲ್ಲು ಮಳೆ ನಿರೀಕ್ಷಿಸುತ್ತಿದ್ದೇವೆ. ಈಗ ಪೂರ್ವ ಮತ್ತು ದಕ್ಷಿಣ ಭಾರತದ ಮೇಲಿನ ಶಾಖವು ಕಡಿಮೆಯಾಗುತ್ತದೆ. ಐದು ದಿನಗಳ ಕಾಲ ಚಂಡಮಾರುತವಿರಲಿದೆ” ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap