ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ

 ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಿತು. ರಾಜ್​ಪಥ್​ನ ಪಥಸಂಚಲನದಲ್ಲಿ ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಕೆ.ವೈ.ಇಂಪನಾಶ್ರೀ ತುಮಕೂರು ಜಿಲ್ಲೆಯವರು.

     ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಮೂಲದ ಇಂಪನಾಶ್ರೀ, ಸೇನಾ ಶಕ್ತಿಯಲ್ಲಿ ಸ್ತ್ರೀ ಶಕ್ತಿ ಬಲವನ್ನು ನಾಡಿಗೆ ತೋರುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದರು.

ಬುಧವಾರದಂದು ರಾಜ್​ಪಥ್​ನಲ್ಲಿ ಇಂಪನಾಶ್ರೀ ಏರ್​ಫೋರ್ಸ್​ ರೆಜಿಮೆಂಟ್​ ಅನ್ನು 3.3 ಕಿ.ಮೀ. ಪಥಸಂಚಲನದಲ್ಲಿ ಮುನ್ನಡೆಸಿದ್ದು ವಿಶೇಷವೆನಿಸಿತು. 2012ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕ 4ನೇ ಬೆಟಾಲಿಯನ್​ ಎನ್​ಸಿಸಿ ಕೆಡೆಟ್​ ಆಗಿ ಭಾಗವಹಿಸಿದ್ದ ಇಂಪನಾಗೆ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದ ಗಣತಂತ್ರ ದಿನದಂದು ಮತ್ತೊಮ್ಮೆ ಪಥಸಂಚಲನದಲ್ಲಿ ಭಾಗವಹಿಸುವ ಸುವರ್ಣಾವಕಾಶ ಸಿಕ್ಕಿದ್ದು ಅಪೂರ್ವವೆನಿಸಿದೆ. ಇವರು ಬೆಂಗಳೂರಿನ ಏರ್​ ಕಮಾಂಡರ್​ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ.

ಹಳ್ಳಿ ಹುಡುಗಿಯ ದಿಟ್ಟ ಸಾಧನೆ:

ಕುಣಿಗಲ್​ ಸರ್ಕಾರಿ ಐಟಿಐ ಕಾಲೇಜಿನ ಜೆಟಿಒ, ಕೋಳಾಲದ ಯಲ್ಲರಾಜು ಹಾಗೂ ಕೆ.ಎಸ್​.ಭಾನುಮತಿ ದಂಪತಿ ಪುತ್ರಿಯಾದ ಇಂಪನಾಶ್ರೀ ಕೊರಟಗೆರೆಯ ರವೀಂದ್ರ ಭಾರತಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ತುಮಕೂರಿನ ಚೇತನಾ ವಿದ್ಯಾಮಂದಿರದಲ್ಲಿ ಪ್ರೌಢಶಾಲೆ ಮುಗಿಸಿ, ಸರ್ವೋದಯ ಪಿಯು ಕಾಲೇಜಿನಲ್ಲಿ 2011-12, 2012-13ರಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು.

ಪಿಯುಸಿಯಲ್ಲಿದ್ದಾಗ ಎನ್​ಸಿಸಿಗೆ ಸೇರ್ಪಡೆಯಾದ ಇಂಪನಾ ಅವರ ಪರಿಶ್ರಮಕ್ಕೆ 2012ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸುವ ಅದೃಷ್ಟ ಒಲಿದಿತ್ತು. ಈ ಸಂದರ್ಭದಲ್ಲಿ ಯುವ ವಿನಿಮಯ ಕಾರ್ಯಕ್ರಮದಡಿ 1 ವರ್ಷ ಚೀನಾ ತರಬೇತಿಗೂ ಆಯ್ಕೆಯಾಗಿದ್ದರು. ಆದರೆ, ಎನ್​ಸಿಸಿ ಕೋಟಾದಡಿ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್​ ಸಿಕ್ಕಿ ಪಯಣದ ದಿಕ್ಕು ಬದಲಾಯಿತು.

ಅಂದು ಸರ್ಕಾರಿ ಶುಲ್ಕ ಭರಿಸಲಾರದಷ್ಟು ಕಷ್ಟದಲ್ಲಿದ್ದ ತಂದೆ ಯಲ್ಲರಾಜು ಪತ್ನಿಯ ಮಾಂಗಲ್ಯ ಸರ ಅಡವಿಟ್ಟಿದ್ದ ಕಷ್ಟದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ. ಮಗಳ ವೈದ್ಯಕೀಯ ಕೋರ್ಸ್​ ಪೂರ್ಣಗೊಳಿಸಲು ಬ್ಯಾಂಕ್​ನಲ್ಲಿ ಶಿಕ್ಷಣ ಸಾಲ ಪಡೆದಿದ್ದರು. ಇಂಪನಾ ಸಹೋದರಿ ಇಂಚರಶ್ರೀ ಎಂ.ಟೆಕ್​ ವ್ಯಾಸಂಗ ಮಾಡುತ್ತಿದ್ದಾರೆ.

2021ರ ಮೇ ನಲ್ಲಿ ಬೆಂಗಳೂರಿನ ಏರ್​ ಕಮಾಂಡರ್​ ಆಸ್ಪತ್ರೆಯಲ್ಲಿ ವೈದ್ಯಕೀಯವಾಗಿ ಆಯ್ಕೆಯಾದ ಇಂಪನಾಗೆ ಈ ಬಾರಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸುವ ಅವಕಾಶ ಒದಗಿ ಬಂದಿದ್ದು ಇದಕ್ಕೆ ಎನ್​ಸಿಸಿಯಲ್ಲಿ ತನ್ನ ಸಾಧನೆ ಕಾರಣ ಎಂಬುದನ್ನು ಇಂಪನಾಶ್ರೀ ಹೆಮ್ಮೆಯಿಂದಲೇ ಹಂಚಿಕೊಳ್ಳುತ್ತಾರೆ.

         ಗಣತಂತ್ರ ದಿನದಂದು ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ಪುತ್ರಿ ಇಂಪನಾಳ ಸಾಧನೆಯನ್ನು ದೂರದರ್ಶನದಲ್ಲಿ ಕಣ್ತುಂಬಿಕೊಂಡಿದ್ದು ಹೆಮ್ಮೆ ಪಡುವ ಸಂಗತಿ. ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿದ್ದ ನಮ್ಮ ಕುಟುಂಬದ ಎಲ್ಲ ನೋವು ಮಗಳ ಸಾಧನೆಯಿಂದ ಮರೆಯಾಗಿದೆ. ನನ್ನೆರಡೂ ಮಕ್ಕಳು ನನ್ನ ಕಣ್ಣುಗಳು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link