HSRP : ಇಲ್ಲಿದೇ ಪ್ರಮುಖ ಅಪ್‌ ಡೇಟ್‌….!

ಬೆಂಗಳೂರು : 

    ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.ಅದರಂತೆ ರಾಜ್ಯದಲ್ಲಿ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ 2 ಕೋಟಿಗೂ ಹೆಚ್ಚಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳಬೇಕಿದೆ.

    ಆರಂಭದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿದ್ದ ಕಾರಣಕ್ಕಾಗಿ ಈಗಾಗಲೇ ಎರಡು ಬಾರಿ ಗಡವು ವಿಸ್ತರಿಸಲಾಗಿದೆ.

    ಅದರಂತೆ ಎರಡನೇ ಬಾರಿ ಗಡುವು ವಿಸ್ತರಿಸಿದ ನಂತರದಿಂದ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವವರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈವರೆಗೆ ಶೇ. 25ರಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ.ಮಾಲೀಕರ ನಿರಾಸಕ್ತಿ, 2 ಬಾರಿ ಗಡುವು ವಿಸ್ತರಣೆ: ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಲಾಗಿದೆ. ಈ ಹಿಂದೆ 2023ರ ನ.17ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಕೇವಲ 30 ಸಾವಿರ ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರು.

    ಹೀಗಾಗಿ ಗಡುವನ್ನು ಫೆ.17ಕ್ಕೆ ವಿಸ್ತರಿಸಲಾಯಿತು. ಆದರೆ, ಆ ಸಂದರ್ಭದಲ್ಲೂ 18 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಒಲವು ತೋರಿದ್ದರು. ಹೀಗಾಗಿ ಮತ್ತೊಮ್ಮೆ ಗಡುವು ವಿಸ್ತರಿಸಿ ಮೇ 31ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.2 ತಿಂಗಳಲ್ಲಿ 34 ಲಕ್ಷ ನೋಂದಣಿ: ಫೆ. 17ರ ಗಡುವಿನ ನಂತರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕ್ರಮೇಣ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಾಹನ ಮಾಲೀಕರ ನೋಂದಣಿ ಪ್ರಮಾಣ ಹೆಚ್ಚಾಗಿ 18 ಲಕ್ಷಕ್ಕೆ ತಲುಪಿತ್ತು.

    ಇದೀಗ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟಾರೆ 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ. ಅಂದರೆ ಎರಡನೇ ತಿಂಗಳಲ್ಲಿ 34 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ. ಅಲ್ಲದೆ, ಶೇ. 25ರಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿದ್ದು, ಇನ್ನೂ ಶೇ. 75ರಷ್ಟು ಅಂದರೆ 1.48 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ.

    ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ ಎಚ್‌ಎಸ್‌ಆರ್‌ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದಾದ ನಂತರ ಅಂದರೆ ಜೂ.1ರಿಂದ ಪೊಲೀಸ್‌ ಇಲಾಖೆ ಜತೆಗೂಡಿ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅಷ್ಟರಲ್ಲಿ ಶೇ.75ರಷ್ಟಾದರೂ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆಯಿದೆ. ಒಂದು ವೇಳೆ ಗಡುವು ವಿಸ್ತರಣೆಗೊಳ್ಳದಿದ್ದರೆ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ನಿಯಮದಂತೆ 500 ರಿಂದ 1 ಸಾವಿರ ರು. ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap