ವಿಜಯಪುರ :
ಬಸವನಬಾಗೇವಾಡಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಸ್ವಪಕ್ಷೀಯ ಜಿಲ್ಲೆಯ ನಾಯಕರೇ ಯತ್ನಿಸುತ್ತಿದ್ದು, ಈ ಭಾರಿ ಅತಿರೇಕತನದ ವರ್ತನೆ ಹೆಚ್ಚಾಗಿದೆ. ಯಾವ ಸಂಚಿನಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಪಕ್ಷದ ನಾಯಕರು ತಕ್ಷಣ ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ತಕ್ಕ ಉತ್ತರ ಕೊಡುತ್ತೇನೆ ಎಂದು ಬಸವನಬಾಗೇವಾಡಿ ಶಾಸಕರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಎಚ್ಚರಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪರಿಸ್ಥಿತಿ ದುರುದ್ದೇಶದ ರಾಜಕಾರಣ ಮುಂದುವರೆದರೆ ಇಡೀ ಜಿಲ್ಲೆಯ 8 ಕ್ಷೇತ್ರಗಳಲ್ಲಿ ನನ್ನ ಅಭಿಮಾನಿಗಳಿದ್ದಾರೆ. ನಾನೇನಾದರೂ ಕರೆ ನೀಡಿದರೆ ಅವರ ಪರಿಸ್ಥಿತಿ ಏನಾದೀತೆಂದು ಅರಿಯಬೇಕು. ನನ್ನ ಪಕ್ಷದ ನಾಯಕರಿಗೆ ನೇರವಾಗಿ ಎಚ್ಚರಿಕೆ ನೀಡುತ್ತೇನೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ 7 ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದು, ಐದು ಗೆಲುವಾಗಿದ್ದು, ಎರಡು ಸೋಲಾಗಿವೆ. ಬಸವನಬಾಗೇವಾಡಿ ಕ್ಷೇತ್ರದಲ್ಲೇ ನಾಲ್ಕು ಚುನಾವಣೆ ಎದುರಿಸಿದ್ದೇನೆ. ಇಂಥ ತಂತ್ರಗಳೇನೂ ನನಗೆ ಹೊಸದಲ್ಲ ಎಂದು ಯಾರ ಹೆಸರು ಪ್ರಸ್ತಪಿಸದೇ ಪರೋಕ್ಷವಾಗಿ ಜಿಲ್ಲೆಯ ಪ್ರಮುಖ ನಾಯಕರ ವಿರುದ್ಧ ಕಿಡಿ ಕಾರಿದರು.
ವಿಜಯಪುರ ಮೌಲಾನಾ ಹಾಗೂ ಕಾಂಗ್ರೆಸ್ ಮುಖಂಡರ ಕುತಂತ್ರದಿಂದ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಮುಸ್ಲೀಂ ಮತಗಳ ವಿಭಜನೆಗಾಗಿ ಎಂಐಎಂ ಸ್ಪರ್ಧೆಗೆ ಇಳಿಸಲಾಗಿದೆ. ಇತರೆ ಕ್ಷೇತ್ರಗಳಲ್ಲಿ ಮುಸ್ಲೀಂ ಮತಗಳು ಹೆಚ್ಚಿದ್ದರೂ ನನ್ನ ಕ್ಷೇತ್ರವನ್ನೇ ಗುರಿ ಮಾಡಿಲಾಗಿದೆ. ಸಂದರ್ಭ ಬಂದಾಗ ಎಲ್ಲರ ಹೆಸರು ಬಹಿರಂಗ ಮಾಡುತ್ತೇನೆ ಎಂದು ಹರಿಹಾಯ್ದರು.
ವಿಜಯಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿದ್ದರೂ ಅಲ್ಲಿ ಅಭ್ಯರ್ಥಿ ಕಣಕ್ಕಿಳಿಸದ ಎಂಐಎಂ, ಮುಸ್ಲಿಂ ಮತಗಳು ಕಡಿಮೆ ಇರುವ ಬಸವನಬಾಗೇವಾಡಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದು ಮುಸ್ಲಿಂ ಮತಗಳನ್ನು ವಿಭಜಿಸಿ, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ನಮ್ಮ ಪಕ್ಷದ ನಾಕರ ರಾಜಕೀಯ ತಂತ್ರ ಎಂದು ದೂರಿದರು.