ಅಸಮರ್ಪಕ ಇ – ಫೈಲಿಂಗ್ ಫೋರ್ಟಲ್ ವ್ಯವಸ್ಥೆ

 ತುಮಕೂರು :  

      ತೆರಿಗೆದಾರರು ತಾಂತ್ರಿಕ ತೊಂದರೆಗಳಿಂದ ನರಳದಿರಲಿ ಎಂದು ಸುಲಭ ವಿಧಾನ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯು ಹೊಸದಾಗಿ ಇ-ಫೈಲಿಂಗ್ ಪೋರ್ಟಲ್‍ನ್ನು 2021ರ ಜೂನ್ 7 ರಂದು ಆರಂಭಿಸಿತ್ತು. ತೆರಿಗೆದಾರರಿಗೆ ಆಧುನಿಕ ಹಾಗೂ ತಡೆರಹಿತ ಅನುಭವ ಒದಗಿಸುವ ಗುರಿ ಇದರ ಉದ್ದೇಶ.

      ತೆರಿಗೆದಾರ ಸ್ನೇಹಿ ಪೋರ್ಟಲ್ ಆಗಬೇಕಿದ್ದ ಈ ಹೊಸ ಇ-ಫೈಲಿಂಗ್ ವ್ಯವಸ್ಥೆ ಸಾಕಷ್ಟು ಅಡಚಣೆಗಳನ್ನು ಉಂಟು ಮಾಡುತ್ತಿದೆ. ಪರಿಣಾಮವಾಗಿ ತೆರಿಗೆ ಪಾವತಿದಾರರು, ಚಾರ್ಟರ್ಡ್ ಅಕೌಂಟೆಂಟ್‍ಗಳು, ತೆರಿಗೆ ವೃತ್ತಿನಿರತರು ಇನ್ನಿಲ್ಲದ ಸಂಕಟಗಳನ್ನು ಅನುಭವಿಸುವಂತಾಗಿದೆ.

      ಇಲಾಖೆಯಿಂದ ನೋಟೀಸ್‍ಗಳ ಮೇಲೆ ನೋಟೀಸ್‍ಗಳು ಬರುತ್ತಲೇ ಇವೆ. ಆದರೆ ಇವುಗಳಿಗೆ ಪ್ರತಿಕ್ರಿಯಿಸಲು ಆದಾಯ ತೆರಿಗೆಯ ಇ ಪೋರ್ಟಲ್ ವೆಬ್‍ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ಲಾಗಿನ್ ಆದಕೂಡಲೇ ಅಲ್ಲಿ ಒಟಿಪಿ ನಂಬರ್ ಬರಬೇಕು. ಅದನ್ನು ಅನುಸರಿಸಿ ಮಾಹಿತಿಯನ್ನು ಅಪ್‍ಡೇಟ್ ಮಾಡಬೇಕು. ಆದರೆ ವೆಬ್‍ಸೈಟ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ಯಾವ ಮಾಹಿತಿಯನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ತೆರಿಗೆ ಪಾವತಿ ವಲಯ ಹೈರಾಣಾಗಿ ಹೋಗಿದೆ.

      ಆದಾಯ ತೆರಿಗೆ ಇಲಾಖೆಯ ನೂತನ ವೆಬ್ ಪೋರ್ಟಲ್‍ನಲ್ಲಿ ಕಾಣಿಸಿರುವ ಪ್ರಮುಖ ಅಡಚಣೆಗಳನ್ನು ನಿವಾರಿಸುವಂತೆ ದೇಶಾದ್ಯಂತ ಹಲವು ಚಾರ್ಟೆರ್ಡ್ ಅಕೌಂಟೆಂಟ್‍ಗಳು, ವೃತ್ತಿನಿರತ ತಜ್ಞರು ವಿತ್ತ ಸಚಿವಾಲಯಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸುವಂತೆ ಹಣಕಾಸು ಸಚಿವರು ಸೂಚನೆಯನ್ನೂ ಕೊಟ್ಟರು. ಆದರೂ ಯಾವುದೇ ಪ್ರಯೋಜನವಾದಂತೆ ಕಂಡುಬರುತ್ತಿಲ್ಲ.

income-tax, tax filing, e-filing, tax portal, online, digital, income tax, I-T returns

ಹಳೆಯ ಐಟಿಆರ್‍ಗಳ ವೀಕ್ಷಣೆ, ರಿಟರ್ನ್ ಸಲ್ಲಿಕೆ ಕುರಿತ ಐದು ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಸಚಿವರು ಸೂಚಿಸಿದ್ದರು. ಇದಾದ ನಂತರ ದಿನೆ ದಿನೆ ಸಮಸ್ಯೆಗಳು ಮತ್ತಷ್ಟು ಹೆಚ್ಚತೊಡಗಿವೆ. ಅಧಿಕೃತ ಮಾಹಿತಿಯ ಪ್ರಕಾರ ಹಣಕಾಸು ಸಚಿವಾಲಯವು 2000ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸಂಬಂಧಿಸಿದಂತೆ 700 ಇ ಮೇಲ್‍ಗಳನ್ನು ಸ್ವೀಕರಿಸಿದೆ. ಜಾಲತಾಣಗಳಲ್ಲಿಯೂ ತೆರಿಗೆ ವಲಯದ ಸಮೂಹವು ಅಸಮಾಧಾನ ವ್ಯಕ್ತಪಡಿಸುತ್ತಿದೆ.

      ಒಂದು ಕಡೆ ತೆರಿಗೆ ವ್ಯಾಪ್ತಿಗೆ ಬರುವ ವಲಯವು ಇ ಪೋರ್ಟಲ್ ಸಮಸ್ಯೆಗಳು ಅರ್ಥವಾಗದೆ ಗೊಂದಲದಲ್ಲಿ ಮುಳುಗಿದ್ದರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದ ತೆರಿಗೆ ಸಮಾಲೋಚಕರು ಮತ್ತು ಆಡಿಟರ್‍ಗಳು ಸಹ ಸಂಕಷ್ಟದಲ್ಲಿ ಮುಳುಗಿದ್ದಾರೆ. ಅವರಿಗೂ ಈ ಅಡಚಣೆಗಳು ಅರ್ಥವಾಗುತ್ತಿಲ್ಲ. ಮುಂದೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ. ಈ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಹುಡುಕಬೇಕಾದ ಇಲಾಖೆಗಳವರು ಮೌನ ವಹಿಸಿದ್ದಾರೆ. ವಿತ್ತ ಸಚಿವರು ಪ್ರಮುಖ ಅಡಚಣೆಗಳನ್ನು ಕೂಡಲೇ ಬಗೆಹರಿಸಿ ಎಂದು ಹೇಳಿಕೆ ನೀಡಿರುವುದನ್ನು ಬಿಟ್ಟರೆ ಮತ್ಯಾವ ಕ್ರಮಗಳೂ ಜರುಗಿದಂತೆ ಕಂಡುಬರುತ್ತಿಲ್ಲ.

      ಎಲ್ಲವೂ ಆನ್‍ಲೈನ್ ವ್ಯವಸ್ಥೆಯಾಗಿರುವ ಕಾರಣ ಈ ಅಡಚಣೆಗಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂಬ ಸಂದಿಗ್ದ ಸ್ಥಿತಿಯಲ್ಲಿ ವೃತ್ತಿನಿರತ ವಲಯ ಸಿಲುಕಿದೆ. ನೇರವಾಗಿ ಇಲಾಖಾಧಿಕಾರಿಗಳನ್ನು ಭೇಟಿ ಮಾಡುವಂತಿಲ್ಲ. ಮಾಡಿದರೂ ಆ ಇಲಾಖೆಗಳು ಸ್ಪಂದಿಸುತ್ತಿಲ್ಲ. ಹೀಗಾದರೆ ನಾವು ಹೇಗೆ ಕೆಲಸ ಮಾಡಬೇಕು ಎನ್ನುತ್ತಾರೆ ತೆರಿಗೆ ಸಮಾಲೋಚಕರು.

      ತುಮಕೂರು ಜಿಲ್ಲೆಯನ್ನೇ ತೆಗೆದುಕೊಂಡರೆ ಇಲ್ಲಿ ಸುಮಾರು 35 ಮಂದಿ ಚಾರ್ಟರ್ಡ್ ಅಕೌಂಟೆಂಟ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಆಡಿಟರ್‍ಗಳು ಇದ್ದಾರೆ. ಇವರೆಲ್ಲರೂ ಪೋರ್ಟಲ್ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಎಲ್ಲೋ ಬೆರಳೆಣಿಕೆಯ ಮಂದಿ ಮಾತ್ರವೆ ಸಮಸ್ಯೆಗಳನ್ನು ಮೇಲ್ ಮುಖಾಂತರ ವಿತ್ತ ಸಚಿವರ ಗಮನಕ್ಕೆ ತರುತ್ತಿದ್ದಾರೆ. ರಾಜ್ಯವ್ಯಾಪಿ , ದೇಶವ್ಯಾಪಿ ಇಂತಹ ದೂರುಗಳು ಸಂಬಂಧಪಟ್ಟ ಸಚಿವರು ಮತ್ತು ಸಚಿವಾಲಯಕ್ಕೆ ಹೆಚ್ಚು ಹೆಚ್ಚು ಸಲ್ಲಿಕೆಯಾದಷ್ಟು ಅಡಚಣೆಗಳು ಒಂದಷ್ಟು ನಿವಾರಣೆಯಾಗಬಹುದೇನೋ?
ಪದೆ ಪದೆ ಎದುರಾಗುವ ಇಂತಹ ಅಡಚಣೆಗಳ ಹಿನ್ನೆಲೆಯಲ್ಲಿಯೇ ತೆರಿಗೆ ಪಾವತಿ ಡೆಡ್‍ಲೈನ್ ಅವಧಿಯನ್ನು ಮತ್ತೆ ಮತ್ತೆ ಮುಂದೂಡಲಾಗುತ್ತಿದೆ. ಆದರೆ ಇದೇ ಪರಿಹಾರವೆ? ಈ ನಡುವೆ ಮತ್ತೆ ಮತ್ತೆ ನೋಟೀಸ್‍ಗಳು , ಸುತ್ತೋಲೆಗಳು ರವಾನೆಯಾಗುತ್ತಲೇ ಇದ್ದು, ಇದರಿಂದ ತೊಂದೆಗೆ ಒಳಗಾಗುತ್ತಿರುವವರು ನೈಜ ತೆರಿಗೆ ಪಾವತಿದಾರರು. ಜಿಎಸ್‍ಟಿ ವ್ಯಾಪ್ತಿಯಲ್ಲಿ ಬರುವವರು ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಹಾಯವಾಣಿಯೂ ಕಾರ್ಯನಿರ್ವಹಿಸುತ್ತಿಲ್ಲ :

      ತೆರಿಗೆ ಇಲಾಖೆಯ ವೆಬ್‍ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ನೋಟೀಸ್‍ಗಳಿಗೆ ರಿಪ್ಲೈ ಕೊಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗಳ ಮೇಲೆ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇವುಗಳನ್ನೆಲ್ಲಾ ಪಟ್ಟಿ ಮಾಡಿ ವಿತ್ತ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಾನೂ ಒಳಗೊಂಡಂತೆ ದೇಶದ ವಿವಿಧ ಕಡೆಗಳಿಂದ ತೆರಿಗೆ ವೃತ್ತಿನಿರತ ತಜ್ಞರು ಹಲವು ಇ ಮೇಲ್‍ಗಳನ್ನು ಕಳುಹಿಸಿದ್ದಾರೆ. ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಒಂದು ಸಹಾಯವಾಣಿಯನ್ನು ತೆರೆಯಲಾಗಿದೆ. ಅದೂ ಸಹ ಕಾರ್ಯನಿರತವಾಗಿಲ್ಲ. ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಹೀಗಾಗಿ ಯಾರಿಗೆ ಹೇಳೋಣ ನಮ್ಮ ಸಮಸ್ಯೆಗಳನ್ನು ಎನ್ನುವಂತಾಗಿದೆ.

-ಎಸ್.ಪ್ರಕಾಶ್, ತೆರಿಗೆ ಸಮಾಲೋಚಕರು ಮತ್ತು ವಕೀಲರು.

      ಹೊಸ ಪೋರ್ಟಲ್‍ನಲ್ಲಿ ಆನ್‍ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ಬಗ್ಗೆ ತಿಳಿಸಲಾಗಿತ್ತು. ತೆರಿಗೆಗಳನ್ನು ಸುಲಭವಾಗಿ ಪಾವತಿಸಲು ಸಕ್ರಿಯಗೊಳಿಸುವ ಬಗ್ಗೆಯೂ ಹೇಳಲಾಗಿತ್ತು. ಎಲ್ಲ ವಹಿವಾಟುಗಳು ಮತ್ತು ಅಪ್‍ಲೋಡ್‍ಗಳು ಒಂದೇ ಡ್ಯಾಶ್ ಬೋರ್ಡ್‍ನಲ್ಲಿ ಗೋಚರಿಸುವಂತೆ ಪ್ರಕ್ರಿಯೆ ನಿರೂಪಿಸಲಾಗಿತ್ತು. ಆದರೆ ಈ ಆನ್‍ಲೈನ್ ವ್ಯವಸ್ಥೆಯೇ ಸಕ್ರಿಯಗೊಂಡಿಲ್ಲ. ವೆಬ್‍ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ಗೊಂದಲಗಳನ್ನು ಪರಿಹರಿಸುವವರೂ ಇಲ್ಲ. ಜಿಎಸ್‍ಟಿ ವ್ಯವಸ್ಥೆಯಲ್ಲಿನ ಲೋಪದೋಷಗಳಂತೆ ಇಲ್ಲಿನ ಸಾಫ್ಟ್‍ವೇರ್ ಲೋಪದೋಷಗಳು ಮುಂದುವರಿದಿವೆ. ಇದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೆ? ಕಂಡರೂ ಈ ಪರಿಯ ನಿರ್ಲಕ್ಷ್ಯ ಏಕೆ ಎಂಬುದು ಅರ್ಥವಾಗುತ್ತಿಲ್ಲ.

 ಸಾ.ಚಿ. ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap