ತುಮಕೂರು:
ಒಂದೇದಿನ 16 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಒಂದೇ ದಿನ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರು ಹಾಗೂ ಮಧುಗಿರಿಯಲ್ಲಿ ಅತೀ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದ್ದು, ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್‍ಪಾಸ್ ರಾಯರ ಮಠದ ಬಳಿ ಒಂದೇ ಕುಟುಂಬದ ಮೂರು ಮಂದಿಗೆ ಸೋಕು ಕಾಣಿಸಿಕೊಂಡು, ಮಿನಿ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಎಚ್ಚರಿಕೆ ಫಲಕ ಹಾಕಲಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಚಿ.ನಾ.ಹಳ್ಳಿ 1, ಮಧುಗಿರಿ 6, ತುಮಕೂರು 7,ಹೊರಗಿನಿಂದ ಜಿಲ್ಲೆಗೆ ಬಂದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಓಮ್ರಿಕಾನ್ ಆತಂಕದಲ್ಲೂ ಕಡಿಮೆ ಇದ್ದ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿರುವುದು ಆತಂಕಕ್ಕೀಡುಮಾಡಿದೆ. 99 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದು ಈವರೆಗೆ 1,21,277 ಪ್ರಕರಣಗಳು ಕಂಡುಬಂದಿದೆ.
ಮಾಸ್ಕ್ ಧರಿಸಿ, ನಿಯಮ ಪಾಲಿಸಿ:
ಕೊರೊನಾ ತಗ್ಗಿದೆ ಎಂದು ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್‍ಗಳನ್ನು ಉಪೇಕ್ಷಿಸುತ್ತಿರುವ ನಡವಳಿಕೆ ಹೆಚ್ಚಾಗಿದ್ದು, ಇತ್ತೀಚಿನ ಚುನಾವಣೆ, ವಿಜಯೋತ್ಸವ ಹೆಸರಲ್ಲೂ ಗುಂಪು ಗುಂಪಾಗಿ ಓಡಾಡಿತ್ತು, ಹೊಸ ವರ್ಷಾಚರಣೆ ಹೆಸರಲ್ಲೂ ಜನಸಂದಣಿ ಹೆಚ್ಚಾಗಿ ಸೇರುವ ಆತಂಕವಿದ್ದು, ಜನ ಎಚ್ಚೆತ್ತುಕೊಳ್ಳುತ್ತಿದ್ದರೆ ಮತ್ತೆ ಕೋವಿಡ್ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಓಮ್ರಿಕಾನ್ ಅಲ್ಲ: ಡಿಎಚ್‍ಓ ಸ್ಪಷ್ಟನೆ
ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್‍ಪಾಸ್ ಬಳಿ ಒಂದೇ ಕುಟುಂಬದ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರ ವಾಸವಿದ್ದ ಸ್ಥಳವನ್ನು ಮಿನಿಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಜಾಲತಾಣಗಳಲ್ಲಿ ಹರಿದಾಡದಂತೆ ಯಾವುದೇ ಓಮ್ರಿಕಾನ್ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಸುಳ್ಳು ಮಾಹಿತಿಯನ್ನು ಜನತೆ ನಂಬಬಾರದು ಎಂದು ಡಿಎಚ್‍ಓ ಡಾ.ನಾಗೇಂದ್ರಪ್ಪ ಹಾಗೂ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಮನವಿ ಮಾಡಿದ್ದರು.