ಸೂರ್ಯಕುಮಾರ್‌ ಯಾದವ್‌ರ ಬ್ಯಾಟಿಂಗ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ರಾಬಿನ್‌ ಉತ್ತಪ್ಪ!

ಮುಂಬೈ:

     ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ  ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. 176 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡದ ಬ್ಯಾಟರ್‌ಗಳು ಭಾರತದ ಬೌಲರ್‌ಗಳ ಎದುರು ಕುಸಿದಿದ್ದರು. ಭಾರತ ತಂಡದ ಗೆಲುವಿನ ಹೊರತಾಗಿಯೂ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಅಸಮಧಾನವಿದೆ. ಈ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ 30ರ ಗಡಿ ದಾಟಲಿಲ್ಲ. ಅದರಲ್ಲಿಯೂ ನಾಯಕ ಸೂರ್ಯಕುಮಾರ್‌ ಯಾದವ್‌  ಅವರು 11ಎಸೆತಗಳಲ್ಲಿ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಸೂರ್ಯ ಫಾರ್ಮ್‌ಗೆ ಮರಳುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ  ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, “ಅವರು  ಖಂಡಿತವಾಗಿಯೂ ಉತ್ತಮ ಆಟಗಾರ ಹಾಗೂ ಮ್ಯಾಚ್‌ ವಿನ್ನರ್‌. ಅವರು ಯಾವುದೇ ತಂಡ ಬಯಸುವ ಆಟಗಾರ. ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲಕ್ಕೆ ಮತ್ತು ಕೆಳಗೆ ಸರಿಸುವುದು ಅವರಿಗೆ ಸಹಾಯ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಏನೇ ಭಾವಿಸಿದರೂ, ಅವರು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕು. ಅವರು ಭಾರತಕ್ಕೆ ಶಾಶ್ವತ ಆಟಗಾರನಾಗಿರಬೇಕು, ಕ್ರಮಾಂಕದಲ್ಲಿ ಬದಲಾವಣೆಯಾಗಬಾರದು,” ಎಂದು ಅಭಿಪ್ರಾಯಪಟ್ಟಿದ್ದಾರೆ. 

   ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ‌, ತಿಲಕ್ ವರ್ಮಾ ಅವರಂತಹ ಉತ್ತಮ ಸಾಮರ್ಥ್ಯ ಹೊಂದಿರುವ ಬ್ಯಾಟರ್‌ಗಳು ತಂಡದಲ್ಲಿರುವುದರಿಂದ ಸೂರ್ಯಕುಮಾರ್‌ ಅವರು ಮೂರನೇ ಕ್ರಮಾಂಕದಲ್ಲಿ ಮುಂದುವರಿಯುವುದು ಉತ್ತಮ. ತಿಲಕ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

   “ಅವರಂತಹ ಉತ್ತಮ ಸಾಮರ್ಥ್ಯದ ಆಟಗಾರನಿಗೆ ಈ ರೀತಿ ಆಗಬಾರದು ಎಂದು ನಾವು ಬಯಸುತ್ತೇವೆ. ಹೆಚ್ಚು ಎಸೆತಗಳನ್ನು ಎದುರಿಸುವ ಅವರಂತಹ ವ್ಯಕ್ತಿಯನ್ನು ನೀವು ಬಯಸುತ್ತೀರಿ. ನೀವು ಅವರನ್ನು ಫಾರ್ಮ್‌ನಲ್ಲಿ ಬಯಸುತ್ತೀರಿ, ವಿಶೇಷವಾಗಿ ತಿಲಕ್ ವರ್ಮಾ ಅವರಂತಹ ಬಹುಮುಖ ಬ್ಯಾಟ್ಸ್‌ಮನ್ ನಿಮ್ಮ ಬಳಿ ಇದ್ದಾಗ, ಅವರು 4 ನೇ ಸ್ಥಾನವನ್ನು ವಹಿಸಿಕೊಂಡು ಆರಂಭಿಕ ವಿಕೆಟ್‌ಗಳು ಬಿದ್ದಾಗ ಒತ್ತಡವನ್ನು ನಿಭಾಯಿಸುತ್ತಾರೆ,” ಎಂದು ಉತ್ತಪ್ಪ ತಿಳಿಸಿದ್ದಾರೆ. 

   ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಟೀಮ್‌ ಇಂಡಿಯಾ ಸಿದ್ಧತೆ ಆರಂಭಿಸಿದೆ. ಆದರೆ ಹಾಲಿ ಚಾಂಪಿಯನ್ಸ್‌ ಬ್ಯಾಟರ್‌ಗಳ ಪ್ರದರ್ಶನ ಅಸಮಾಧಾನವನ್ನು ಹುಟ್ಟು ಹಾಕಿದೆ. ಸೂರ್ಯಕುಮರ್ ಯಾದವ್‌ ಮೂರನೇ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿರುವುದು ದೊಡ್ಡ ತಲೆ ನೋವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಶುಭಮನ್‌ ಗಿಲ್‌ ವಿಕೆಟ್‌ ಕಳೆದುಕೊಂಡ ಬಳಿಕ ಮೈದಾನಕ್ಕೆ ಬಂದ ಸೂರ್ಯಕುಮಾರ್‌ ದೊಡ್ಡ ಇನಿಂಗ್ಸ್‌ ಆಡುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ ಸೂರ್ಯಕುಮಾರ್‌ 11 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡಲು ಮತ್ತೊಮ್ಮೆ ವಿಫಲರಾದರು.

Recent Articles

spot_img

Related Stories

Share via
Copy link