
ತುಮಕೂರು:
ದೇಶಾದ್ಯಂತ ಒಂದೇ ಪಕ್ಷ ಬಹುಮತ ಪಡೆದಿರುವುದರಿಂದ ಮತದಾರನ ನಿರೀಕ್ಷೆಗಳು ಹೆಚ್ಚಾಗಿವೆ. ಈ ನಿರೀಕ್ಷೆಗಳ ಸಾಕಾರಕ್ಕೆ ಸರ್ಕಾರ ಕಾರ್ಯೋನ್ಮುಖವಾಗಬೇಕು. ದಿಟ್ಟ ನಿರ್ಧಾರಗಳು ಸರ್ಕಾರದಿಂದ ಹೊರ ಬೀಳುತ್ತಿರುವುದೇನೋ ನಿಜ. ಆದರೆ ಇದರ ಮುಂದಿನ ಪರಿಣಾಮಗಳು ಏನೆಂಬುದನ್ನು ಈಗಲೇ ವಿಶ್ಲೇಷಿಸುವುದು ಕಷ್ಟ. ರಾಜ್ಯಗಳಿಗೆ ಸ್ವಾಯತ್ತತೆ ಕಲ್ಪಿಸಿದ್ದರೂ ಪ್ರಾದೇಶಿಕವಾಗಿ ತನ್ನ ಹಿಡಿತ ಇಟ್ಟುಕೊಂಡಿರುವುದರಿಂದ ರಾಜ್ಯ ಮತ್ತು ರಾಷ್ಟ್ರಾಡಳಿತದಲ್ಲಿ ಒಂದಕ್ಕೊಂದು ಸವಾಲಿನ ಆಡಳಿತವೇ ಎದುರಾಗುತ್ತಿದೆ.
ರಾಜಕಾರಣದಲ್ಲಿ ಪಕ್ಷಾಂತರ ಪರ್ವ ರಾಷ್ಟ್ರದ ಉದ್ದಗಲಕ್ಕೂ ವ್ಯಾಪಿಸಿದೆ. ಆಸೆ, ಆಮಿಷಗಳಿಗೆ ಒಳಗಾಗುತ್ತಿರುವ ರಾಜಕಾರಣಿಗಳು ಮೌಲ್ಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸ್ವಾತಂತ್ರ್ಯ ಗಳಿಸಿದ ಜನತೆಗೆ ಇದು ಭಯ-ಆತಂಕವನ್ನುಂಟು ಮಾಡಿದೆ. ಮತ ನೀಡಿದ ಪ್ರಜೆಗಳನ್ನು ಚುನಾಯಿತ ಪ್ರಭುಗಳು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ತಮ್ಮಿಂದ ಆರಿಸಿ ಹೋದ ಪ್ರತಿನಿಧಿಗಳು ಆಡುವ ಆಟಗಳಿಂದ ಮತದಾರನ ರೋಷ ನೆತ್ತಿಗೇರಿದೆ. ಘೋರ ಅಪರಾಧಗಳಲ್ಲಿ ಭಾಗಿಯಾಗಿರುವವರು ಮತ್ತು ಹಣವಂತರ ಪಾಲಾಗಿರುವ ರಾಜಕಾರಣವಿಂದು ದೇಶದ ದುಸ್ತಿತಿಗೆ ಕಾರಣವಾಗುತ್ತಿದೆ.
ರಾಷ್ಟ್ರವಿಂದು ಅತಿವೃಷ್ಠಿ-ಅನಾವೃಷ್ಠಿ ಎರಡನ್ನೂ ನೋಡುವಂತಾಗಿದೆ. ಅತಿವೃಷ್ಠಿಯೇ ಹೆಚ್ಚು ಸಂಕಟ ತಂದಿದೆ. ಇದನ್ನು ನಿಭಾಯಿಸುವ ಶಕ್ತಿಯೆಡೆಗೆ ರಾಷ್ಟ್ರ ಮತ್ತು ರಾಜ್ಯಗಳು ಸನ್ನದ್ಧವಾಗಬೇಕಿದೆ. ಕಾಶ್ಮೀರದ ಕಣಿವೆಯಲ್ಲಿ ಭಾರತದ ಅಖಂಡತೆ ಪ್ರತಿಬಿಂಬಿಸುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಂಡಿರುವುದು ಸಂತಸದ ವಿಚಾರ. ಕಾಶ್ಮೀರಕ್ಕೆ ಪ್ರತ್ಯೇಕ ಸವಲತ್ತುಗಳನ್ನು ನೀಡಿ ಜಾರಿಗೆ ತರಲಾಗಿದ್ದ ಸಂವಿಧಾನದ 370 ಹಾಗೂ 35 ಎ ವಿಧಿಗಳನ್ನು ರದ್ದುಪಡಿಸಿರುವುದು ಒಂದು ಐತಿಹಾಸಿಕ ನಿರ್ಧಾರ. ರಾಷ್ಟ್ರಾದ್ಯಂತ ಈ ನಿರ್ಧಾರಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ರದ್ದತಿ ನಿರ್ಧಾರ ಘೋಷಣೆಯಾಗಿದ್ದರೂ ಮುಂದೆ ಅನುಷ್ಠಾನದ ಹಾದಿಯನ್ನೂ ಅರಗಿಸಿಕೊಳ್ಳಬೇಕು. ಬಹು ದಶಕಗಳಿಂದ ನಡೆದುಕೊಂಡು ಬಂದಿರುವ ವಿದ್ಯಮಾನಗಳನ್ನು ಏಕ ಕಾಲಕ್ಕೆ ಬದಲಿಸುವುದು ಅಷ್ಟು ಸುಲಭವಲ್ಲ. ಮುಸ್ಲಿಂ ಮಹಿಳೆಯರ ಪಾಲಿಗೆ ಶೋಷಣೆ ಎಂದೇ ಕರೆಯಲ್ಪಟ್ಟಿದ್ದ ತಲಾಖ್ ರದ್ದು ಮಾಡಿದ್ದು ಮತ್ತೊಂದು ಐತಿಹಾಸಿಕ ನಿರ್ಧಾರ. ಮಹಿಳೆಯರಿಗೆ ಧ್ವನಿ ಕೊಟ್ಟ ಈ ಕ್ರಮ ಪ್ರಗತಿದಾಯಕ ಎಂದೇ ಭಾವಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ, ನೋಟು ಅಮಾನ್ಯೀಕರಣ ಕ್ರಮಗಳು ಅಂದುಕೊಂಡಷ್ಟು ಸುಲಭವಾಗಿಲ್ಲ. ಹಣದ ವ್ಯವಹಾರಗಳು ಒಂದು ಚೌಕಟ್ಟಿನಲ್ಲಿಯೇ ನಿರ್ವಹಣೆಯಾಗಬೇಕೆನ್ನುವ ಕಾರಣ ಸಾಮಾನ್ಯ ಜನರಲ್ಲಿ ಹಣದ ಚಲಾವಣೆ ಕಡಿಮೆಯಾಗುತ್ತಿದೆ. ವ್ಯಾಪಾರ ವಹಿವಾಟುಗಳ ಮೇಲೆಯೂ ಇದರ ಪ್ರಭಾವ ಹೆಚ್ಚಾಗಿದೆ. ದಾನ, ಧರ್ಮಗಳು, ಸಂಘ ಸಂಸ್ಥೆಗಳ ಚಟುವಟಿಕೆಗಳು, ಸಾಂಘಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಕೈಗಾರಿಕೆಗಳು, ವ್ಯಾಪಾರಗಳು ನಿಧಾನಗತಿಯಲ್ಲಿವೆ. ಕೆಲವು ಉದ್ಯಮಗಳನ್ನು ನಡೆಸುವುದೇ ದುಸ್ತರವಾಗಿದೆ. ಜನರ ಖರೀದಿ ವಹಿವಾಟಿನಲ್ಲಿ ಹಿನ್ನಡೆ ಉಂಟಾಗಿದೆ. ಹೊಸ ನೋಟುಗಳು ಬಂದಾಗ ಹಿಂದಿನ 15 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನೋಟು ಮುದ್ರಣವಾದರೂ ಆ ನೋಟುಗಳು ನಿಗೂಢ ಜಾಗಗಳಲ್ಲಿ ಶೇಖರಣೆಯಾಗಿದೆಯೇ ಎಂಬ ಅನುಮಾನಗಳು ಮೂಡಿದೆ. ಹವಾಲ ದಂಧೆ ಹೊರ ರಾಷ್ಟ್ರಗಳಿಗೂ ಹಬ್ಬಿರುವುದರಿಂದ ಈ ಸ್ಥಿತಿ ಬಂದೊದಗಿದೆ. ಇದು ಸರಳೀಕರಣವಾಗದ ಹೊರತು ಉದ್ಯಮ-ವ್ಯವಹಾರಗಳಲ್ಲಿ ಚೇತರಿಕೆ ಕಾಣದು. ಆರ್ಥಿಕ ವಹಿವಾಟು ದೇಶದಲ್ಲಿ ದಿನೆ ದಿನೆ ಸ್ಥಿತ್ಯಂತರಗೊಳ್ಳುತ್ತಿದೆ. ವಿದ್ಯಾಕ್ಷೇತ್ರ, ವೈದ್ಯಕೀಯ, ತಾಂತ್ರಿಕ ಇತರೆ ಉನ್ನತ ಶಿಕ್ಷಣ ವ್ಯವಸ್ಥೆ ಬಡವರಿಗೆ ದುಸ್ತರವಾಗುತ್ತಿದೆ.
ಕಾರ್ಮಿಕ ಮತ್ತು ಬಡ ಜನರ ಸ್ತರಗಳಲ್ಲಿ ಅಂತಹ ವ್ಯತ್ಯಾಸವೇನೂ ಕಂಡುಬರುತ್ತಿಲ್ಲ. ಮೂಲಭೂತ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ ಇವೆಲ್ಲವೂ ಉಚಿತವಾಗಿರುವುದರಿಂದ ಈ ವರ್ಗಗಳಲ್ಲಿ ಆತಂಕ –ಗಲಿಬಿಲಿ ಕಾಣುತ್ತಿಲ್ಲ. ಆದರೆ ಮಧ್ಯಮ, ಮೇಲ್ವರ್ಗದ ಉದ್ದಿಮೆಗಳು ವ್ಯಾಪಾರವಿಲ್ಲದೆ ಹೆಚ್ಚು ಸಂಕಟಕ್ಕೊಳಗಾಗಿವೆ, ನಷ್ಟ ಅನುಭವಿಸುತ್ತಿವೆ. ಈ ವರ್ಗವಿಂದು ಹೇಳಿಕೊಳ್ಳಲಾಗದ ಆತಂಕದಲ್ಲಿ ಬದುಕು ನಡೆಸುವಂತಾಗಿದೆ. ಎಲ್ಲ ಹಂತಗಳಲ್ಲೂ ಏಕಸ್ವಾಮ್ಯದ ವಸಾಹತು ಪ್ರವೃತ್ತಿ ಉದ್ಯಮ – ವ್ಯಾಪಾರ ಪತಿಗಳು ವಿಜೃಂಭಿಸುತ್ತಿದ್ದಾರೆ.
ಆರ್ಥಿಕ ಅಪರಾಧೀಕರಣವು ಎಗ್ಗಿಲ್ಲದೆ ಮೇಲೇರುತ್ತಿದೆ. ಸಾವಿರ ಸಾವಿರ ಕೋಟಿಗಳಲ್ಲಿ ಹೂಡಿಕೆದಾರರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಬ್ಯಾಂಕುಗಳು ಸಾಲ ಹಿಂಪಡೆಯಲಾಗದೆ ದಿವಾಳಿ ಸ್ಥಿತಿಗೆ ತಲುಪಿವೆ. ಸಾಲ ಕೊಡದೆ ಬ್ಯಾಂಕುಗಳಿಗೆ ಗತ್ಯಂತರವಿಲ್ಲ. ಕೊಟ್ಟ ಸಾಲ ವಾಪಸ್ಸಾಗುತ್ತಿಲ್ಲ. ಕಾರಣ ಏನೆಂಬುದು ಅನುಭವಿಸಿದವರಿಗೆ ಸ್ಪಷ್ಟ. ಆರ್ಥಿಕ ಹಿಂಜರಿತ, ಸಾಲ ವಸೂಲಾತಿ ಒತ್ತಡದಿಂದ ಉದ್ಯಮಿಗಳು ಈ ದೇಶವನ್ನೇ ಬಿಟ್ಟು ಪಲಾಯನ ಮಾಡುವ ಸ್ಥಿತಿಗೆ ಬಂದಿದ್ದಾರೆ. ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೂಪಾಯಿ ಮೌಲ್ಯ ಇಳಿಕೆ ವೇಗದ ಗತಿಯಲ್ಲಿ ನಡೆಯುತ್ತಿದೆ. ಆಮದು ವಸ್ತುಗಳ ಬೆಲೆಯು ಗಗನಕ್ಕೇರುತ್ತಿದೆ.
ಬ್ಯಾಂಕಿಂಗ್ ವಲಯ ಇಂದು ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಸೇವಾ ತೆರಿಗೆಗಳ ಹೆಸರಿನಲ್ಲಿ ಗ್ರಾಹಕರ ಖಾತೆಗಳಲ್ಲಿ ಇಟ್ಟ ಹಣ ಗೊತ್ತಾಗದ ರೀತಿಯಲ್ಲಿ ಕತ್ತರಿಯಾಗುತ್ತಿದೆ. ತೆರಿಗೆಗಳು ಗಗನಕ್ಕೇರುತ್ತಿವೆ. ಬ್ಯಾಂಕಿಂಗ್ ವಹಿವಾಟು ದುಬಾರಿ ಜೀವನದ ವ್ಯಾಪಾರಿ ಕ್ಷೇತ್ರವಾಗಿ ಪರಿಣಮಿಸಿದೆ. ಗ್ರಾಹಕರ ದೌರ್ಬಲ್ಯ ಮತ್ತು ಬ್ಯಾಂಕಿಂಗ್ ವಲಯದಲ್ಲಿನ ನಿಗೂಢ ನೀತಿ ನಿಯಮಗಳಿಂದಾಗಿ ಬ್ಯಾಂಕುಗಳ ಮೂಲಕ ಹಣ ನಿರ್ವಹಣೆ ಒಂದು ದುಬಾರಿ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ. ಎಲ್ಲವೂ ಬ್ಯಾಂಕ್ ಮೂಲಕವೇ ನಡೆಯಬೇಕೆಂಬುದು ಇಂದಿನ ಅನಿವಾರ್ಯ. ಆದರೆ ನೀತಿಗಳು ಮಾತ್ರ ಭಯಾನಕ.
ದೇಶದ ಬೆನ್ನೆಲುಬಾಗಿದ್ದ ರೈತರು, ಕೃಷಿ ವಲಯ ಆತಂಕದ ಸ್ಥಿತಿಯತ್ತ ಸಾಗುತ್ತಿದೆ. ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ಈ ಚಟುವಟಿಕೆಯಲ್ಲಿ ಲಾಭ ಇಲ್ಲ ಎಂದರಿತು ವ್ಯವಸಾಯ ಚಟುವಟಿಕೆಯನ್ನೇ ಸ್ಥಗಿತಗೊಳಿಸುವ ಸ್ಥಿತಿಗೆ ರೈತ ಬಂದು ನಿಂತಿದ್ದಾನೆ. ಮುಂದೆ ಆಹಾರೋತ್ಪಾದನೆಯ ಬಹುದೊಡ್ಡ ಸಂಕಟಕ್ಕೆ ಸಿಲುಕುವ ಅಪಾಯವಿದೆ. ಸರ್ಕಾರಗಳು ಬೇರೆ ಕ್ಷೇತ್ರಗಳಿಗೆ ನೀಡುತ್ತಿರುವ ಆದ್ಯತೆಯನ್ನು ಕೃಷಿ ವಲಯಕ್ಕೆ ನೀಡದೇ ಇರುವುದು ದುರಂತ. ದಿನವಿಡಿ ತನ್ನ ಅಸ್ತಿತ್ವದ, ಪಕ್ಷ ಚಟುವಟಿಕೆಗಳಲ್ಲಿ ನಿರತರಾಗಿರುವ ರಾಜಕಾರಣಿಗಳಿಗೆ ಈ ಕ್ಷೇತ್ರದ ಸಮಸ್ಯೆಗಳು ಅರ್ಥವಾಗದೇ ಇಲ್ಲ.
ರಾಜಕಾರಣದಲ್ಲಾಗುತ್ತಿರುವ ಅತ್ಯಾಚಾರ, ಅನಿಶ್ಚಿತತೆಗಳು ಅಧಿಕಾರಶಾಹಿ ವರ್ಗದ ಮೇಲೆ ನೇರ ಪರಿಣಾಮ ವನ್ನುಂಟು ಮಾಡುತ್ತಿದೆ. ರಾಜಕಾರಣ ಮತ್ತು ಅಧಿಕಾರಶಾಹಿ ವರ್ಗ ಒಂದು ನಾಣ್ಯದ ಎರಡು ಮುಖಗಳಾಗಿದ್ದು, ದೇಶದ ಅಭಿವೃದ್ಧಿ ಇವರಾರಿಗೂ ಬೇಕಿಲ್ಲ. ಲಂಚದ ಅಮಲಿಗೆ ಒಳಗಾಗಿರುವ ಭ್ರಷ್ಟ ವ್ಯವಸ್ಥೆಯಿಂದಾಗಿ ಕಾನೂನು ಕಟ್ಟಳೆಗಳಿಗೆ ಬೆಲೆ ಇಲ್ಲವಾಗಿದೆ. ಹಣ ಮಾಡುವುದು ಒಂದು ದಂಧೆಯಾಗಿ ಮಾರ್ಪಟ್ಟಿದೆ. ಸಾಮಾನ್ಯ ಜನರು ಭ್ರಷ್ಟ ವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ.
ಇದರಿಂದ ಪಾರುಮಾಡುವ ಹೊಸ ಮಾರ್ಗವೊಂದರ ಅವಶ್ಯಕತೆ ಇದೆ. ಸ್ವಾತಂತ್ರ್ಯ ಗಳಿಸಿಕೊಂಡದ್ದು ಗುಲಾಮ ಗಿರಿಯಿಂದ ಪಾರಾಗಲು. ನಮ್ಮದೇ ವ್ಯವಸ್ಥೆ ರಚಿಸಿಕೊಳ್ಳಲು. ನಾವೇ ಆಡಳಿತ ನಡೆಸಲು. ಆದರೆ ಆಗಿದ್ದಾದರೂ ಏನು ಎಂಬ ಆತ್ಮಾವಲೋಕನ ಮಾಡಿಕೊಂಡಾಗ ಭ್ರಮನಿರಸನವಾಗುವುದೇ ಹೆಚ್ಚು. ಸ್ವಾತಂತ್ರ್ಯದ ಧ್ಯೇಯ ಮೊಳಗುವ ವಾತಾವರಣ ನಿರ್ಮಾಣವಾಗಬೇಕು. ಅಂತಹ ದಿನಗಳು ಬರಲೆಂದು ಆಶಿಸೋಣ. ಎಲ್ಲರಿಗೂ 73ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
– ಸಂಪಾದಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
