ಬ್ರಿಸ್ಬೇನ್:
ಆಸ್ಟ್ರೇಲಿಯಾ ಎದುರು 23 ವರ್ಷಗಳ ಬಳಿಕ ಮತ್ತೆ ಫಾಲೋಆನ್‌ಗೆ ಸಿಲುಕುವ ಭೀತಿಯಲ್ಲಿದ್ದ ಭಾರತ, ಕೊನೆಗೂ ಆಕಾಶ್ ದೀಪ್ ಮತ್ತು ಜಸ್‌ಪ್ರೀತ್ ಬುಮ್ರಾ ಬ್ಯಾಟಿಂಗ್ ಸಾಹಸದ ನೆರವಿನಿಂದ ಈ ಅವಮಾನದಿಂದ ಪಾರಾಗಿದೆ. ಭಾರತ ಫಾಲೋಆನ್ ಗಡಿ ದಾಟುತ್ತಿದ್ದಂತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮ ಪಂದ್ಯವನ್ನೇ ಗೆದ್ದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಫಾಲೋಆನ್‌ಗೆ ತುತ್ತಾಗಿದ್ದು 2001ರಲ್ಲಿ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ.
ಭಾರತ ತಂಡ ಕೊನೆಯ ಬಾರಿಗೆ ಫಾಲೋಆನ್‌ಗೆ ಎದುರಿಸಿದ್ದು, 13 ವರ್ಷಗಳ ಹಿಂದೆ. 2011ರಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದದ ಓವಲ್ ಟೆಸ್ಟ್ ಪಂದ್ಯದಲ್ಲಿ. ನಂತರ ಆಡಿದ 100ಕ್ಕೂ ಅಧಿಕ ಟೆಸ್ಟ್‌ಗಳಲ್ಲಿ ಭಾರತ ಫಾಲೋಆನ್ ಎದುರಿಸಿಲ್ಲ. ಈ ಪೈಕಿ ಮೂರು ಬಾರಿ ಭಾರತಕ್ಕೆ ಎದುರಾಳಿ ತಂಡಕ್ಕೆ ಫಾಲೋಆನ್ ಹೇರುವ ಅವಕಾಶವಿದ್ದರೂ ಭಾರತ ಮರಳಿ ಬ್ಯಾಟಿಂಗ್ ನಡೆಸಿತ್ತು.
ಆಕಾಶ್‌ದೀಪ್ ಅವರು ಸಿಕ್ಸರ್ ಬಾರಿಸುವ ಮೂಲಕ ಫಾಲೋಆನ್ ಭೀತಿಯಿಂದ ಭಾರತವನ್ನು ಪಾರು ಮಾಡಿದರು. ಬುಮ್ರಾ ಕೂಡ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಭಾರತ ಪಾಲಿಗೆ ಗಾಬಾ ಮೈದಾನದಲ್ಲಿ ಹೀರೋಗಳಾಗಿ ಮೂಡಿ ಬಂದರು. ಸದ್ಯ ಆಕಾಶ್ ದೀಪ್ 27*(2 ಬೌಂಡರಿ ಮತ್ತು 1 ಸಿಕ್ಸರ್), ಜಸ್‌ಪ್ರೀತ್ ಬುಮ್ರಾ 10*(1 ಸಿಕ್ಸರ್) ಬಾರಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
4 ವಿಕೆಟ್‌ಗೆ 51 ರನ್ ಗಳಿಸಿದ್ದಲ್ಲಿಂದ ಮಂಗಳವಾರ ನಾಲ್ಕನೇ ದಿನದಾಟ ಆರಂಭಿಸಿದ ಭಾರತಕ್ಕೆ ಆರಂಭದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಆಸರೆಯಾದರೆ ಆ ಬಳಿಕ ಆಲ್‌ರೌಂಡರ್ ರವೀಂದ್ರ ಜಡೇಜಾ ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು. ಉಭಯ ಆಟಗಾರರು ಕೂಡ ಅರ್ಧಶತಕ ಬಾರಿಸಿದರು. ಈ ಜೋಡಿ 6ನೇ ವಿಕೆಟ್‌ಗೆ 67 ರನ್‌ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು. 33 ರನ್ ಗಳಿಸಿದ್ದ ರಾಹುಲ್ ಇಂದು 51 ರನ್ ಬಾರಿಸಿ ಒಟ್ಟು 84 ರನ್‌ಗಳಿಸಿದರು. ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವನ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
ರಾಹುಲ್ ವಿಕೆಟ್ ಪತನದ ಬಳಿಕ ರವೀಂದ್ರ ಜಡೇಜಾ ಮತ್ತು ನಿತೀಶ್ ರಾಣಾ 8ನೇ ವಿಕೆಟ್‌ಗೆ 53 ರನ್ ಒಟ್ಟುಗೂಡಿಸಿ ತಂಡಕ್ಕೆ ಆಸರೆಯಾದರು. ಈ ವೇಳೆ ಹಲವು ಬಾರಿ ಮಳೆಯಿಂದ ಅಡಚಣೆಯಾಯಿತು. ಜಡೇಜಾ 123 ಎಸೆತ ಎದುರಿಸಿ 77 ರನ್ ಬಾರಿಸಿದರೆ ನಿತೀಶ್ ರೆಡ್ಡಿ 16 ರನ್‌ಗೆ ವಿಕೆಟ್ ಕೈಚೆಲ್ಲಿದರು.