ಬೆಂಗಳೂರು
ಜಾಗತಿಕ ಉತ್ಪಾದನಾ ವಲಯಕ್ಕೆ ಅನುಗುಣವಾಗಿ ಬಹುರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದ್ದು, ಇದರಿಂದ ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಯಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ನ್ಯಾಸ್ಕಾಂ ಆಯೋಜಿಸಿದ್ದ ಡೀಪ್ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, 2014ಕ್ಕೂ ಮುನ್ನ ಭಾರತ ಮತ್ತು ಬೆಂಗಳೂರು ನಿರ್ದಿಷ್ಟವಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಎಚ್‌ಸಿಎಲ್ ಹಾಗೂ ಟಿಸಿಎಸ್‌ಗಳಿಗೆ ಖ್ಯಾತಿ ಪಡೆದಿತ್ತು. ಇಂದು ಭಾರತ ಆಳವಾದ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ತನ್ನ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಿಕೊಂಡಿದೆ.
ಕೃತಕ ಬುದ್ಧಿಮತ್ತೆ, ಸೈಬರ್ ಅಪರಾಧ, ಸೆಮಿಕಂಡಕ್ಟರ್, ಸ್ವಯಂಚಾಲಿತ ವಾಹನ ವಲಯಗಳಲ್ಲಿ ಹಲವಾರು ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಜಾಗತಿಕ ಗ್ರಾಹಕರಿಗೆ ಭಾರತ ಪೂರೈಕೆ ಸರಪಳಿಯ ನಂಬಿಕಸ್ಥ ರಾಷ್ಟ್ರವಾಗಿದೆ ಎಂದರು.
2014ಕ್ಕೂ ಮುನ್ನ ಶೇಕಡ 82ರಷ್ಟು ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳ ಲಾಗುತ್ತಿತ್ತು, ಇದೀಗ ಶೇಕಡ 100ರಷ್ಟು ಭಾರತದಲ್ಲೇ ವಿನ್ಯಾಸ ಹಾಗೂ ಉತ್ಪಾದನೆ ಮಾಡುವ ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತಿದೆ. ಜಗತ್ತಿನ ಹತ್ತು ಪ್ರಮುಖ ಕಂಪನಿಗಳ ಮೊಬೈಲ್‌ಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ.
ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ, ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಾರಿಗೊಳಿಸಿದ್ದು, ಇದರಿಂದ ಉತ್ಪಾದನಾ ಚಟುವಟಿಕೆ ಹೆಚ್ಚಾಗಿದೆ ಎಂದರು.
ಬೆAಗಳೂರಿನಲ್ಲಿ ಆಪಲ್ ಮೊಬೈಲ್ ತನ್ನ ಉತ್ಪಾದನಾ ನೆಲೆಯನ್ನು ಸ್ಥಾಪಿಸುತ್ತಿದ್ದು, ಇದರಿಂದ ಕರ್ನಾಟಕ ಉತ್ಪಾದನಾ ಕ್ಷೇತ್ರದಲ್ಲಿ ಪರಿವರ್ತನೆಯ ತಾಣವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ 18 ರಿಂದ 20 ಲಕ್ಷ ಯುವ ಸಮೂಹ ಉನ್ನತ ತಂತ್ರಜ್ಞಾನ ವಲಯದಲ್ಲಿ ಕೌಶಲ್ಯ ವೃದ್ಧಿಸಿಕೊಳ್ಳಲಿದ್ದು, ಇದರಿಂದ ದೇಶದಲ್ಲಿ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ