ಬಂಗಾಳ:
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮಾರ್ತ್ಯ ಸೇನ್ ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ಫಲಿತಾಂಶಗಳು ಭಾರತ ಹಿಂದೂ ರಾಷ್ಟ್ರ ಅಲ್ಲ ಎಂಬ ವಾಸ್ತವಾಂಶವನ್ನು ತೋರಿಸಿದೆ ಎಂದು ಅಮಾರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕಾನೂನಿನ ಬಗ್ಗೆಯೂ ಮಾತನಾಡಿರುವ ಅಮಾರ್ತ್ಯ ಸೇನ್, ವಿಚಾರಣೆ ಇಲ್ಲದೇ ಜನರನ್ನು ಕಂಬಿ ಹಿಂದೆ ಕಳಿಸುವ ಪರಿಪಾಠ ಈ ದೇಶದಲ್ಲಿ ಬ್ರಿಟೀಷರ ಕಾಲದಿಂದಲೂ ನಡೆದುಬಂದಿದೆ. ಈಗ ಕಾಂಗ್ರೆಸ್ ಆಡಳಿತಕ್ಕೆ ಹೋಲಿಕೆ ಮಾಡಿದರೆ, ಬಿಜೆಪಿ ಸರ್ಕಾರದಲ್ಲಿಯೇ ಈ ಪರಿಸ್ಥಿತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
ಅಮೇರಿಕಾದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಾರ್ತ್ಯ ಸೇನ್, ಬೆಂಗಾಲಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ್ದು, “ಪ್ರತಿ ಚುನಾವಣೆಯ ನಂತರ ನಾವು ಯಾವಾಗಲೂ ಬದಲಾವಣೆಯನ್ನು ಕಾಣುತ್ತೇವೆ ಎಂದು ಆಶಿಸುತ್ತೇವೆ. ಹಿಂದೆ (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ) ಜನರನ್ನು ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಹಾಕುವುದು ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಇದು ನಿಲ್ಲಬೇಕು” ಎಂದು ಅವರು ಹೇಳಿದರು.
ಭಾರತ ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ರಾಜಕೀಯವಾಗಿ ಮುಕ್ತ ಮನಸ್ಸಿನ ಅವಶ್ಯಕತೆಯಿದೆ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಆಲೋಚನೆ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಬಗ್ಗೆಯೂ ಮಾತನಾಡಿರುವ ಅಮಾರ್ತ್ಯ ಸೇನ್, ಹೊಸ ಕೇಂದ್ರ ಸಚಿವ ಸಂಪುಟ ಹಿಂದಿನ ಸರ್ಕಾರದ ತದ್ರೂಪ ಸಂಪುಟವಾಗಿದೆ ಎಂದಿದ್ದಾರೆ.
ಇನ್ನು ರಾಮ ಮಂದಿರವಿರುವ ಅಯೋಧ್ಯೆ ಇರುವ ಲೋಕಸಭಾ ಕ್ಷೇತ್ರದಲ್ಲೇ ಬಿಜೆಪಿ ಸೋತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದ ನಿಜವಾದ ಗುರುತನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ. .ಇಷ್ಟು ಹಣ ವ್ಯಯಿಸಿ ರಾಮಮಂದಿರ ಕಟ್ಟುವುದು, ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವುದು ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ಆಗಬಾರದಿತ್ತು. ಇದು ಭಾರತವನ್ನು ನಿರ್ಲಕ್ಷಿಸುವ ಪ್ರಯತ್ನವನ್ನು ತೋರಿಸುತ್ತದೆ ಎಂದು ಅಮಾರ್ತ್ಯ ಸೇನ್ ಹೇಳಿದ್ದಾರೆ.