ಮೋದಿಗೆ ಸವಾಲೆಸೆಯಲು ಸಜ್ಜಾದ “INDIA”

ಬೆಂಗಳೂರು

     ದೇಶದ ಪ್ರಧಾನಿ ಹುದ್ದೆಗೆ ನಾವು ಆಕಾಂಕ್ಷಿಯಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿ ಎದುರು ತಲೆ ಎತ್ತಲು ಹವಣಿಸುತ್ತಿರುವ ಮಹಾಘಟಬಂಧನ್ ಗೆ ಕಾಂಗ್ರೆಸ್ ಪಕ್ಷ ಇಂದಿಲ್ಲಿ ಟಾನಿಕ್ ನೀಡಿದೆ.

     ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಮಹಾಮೈತ್ರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಈ ಘೋಷಣೆ ಮಾಡಿದ್ದಾರೆ.

     ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು,ಸಂವಿಧಾನ ಉಳಿಯಬೇಕು,ಜನರ ಮನಸ್ಸಿನಲ್ಲಿರುವ ಅಸ್ಥಿರತೆ ನಿವಾರಣೆಯಾಗಬೇಕು.ಈ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ವಿರುದ್ದ ತಲೆ ಎತ್ತುತ್ತಿರುವ ಮಹಾಘಟಬಂಧನ್ ಒಗ್ಗಟ್ಟಿನಿಂದ ಹೋರಾಡಬೇಕು ಎಂದ ಮಲ್ಲಿಕಾರ್ಜುನ ಖರ್ಗೆ,ಈ ದಿಸೆಯಲ್ಲಿ ನಮಗೆ ಪ್ರಧಾನಿ ಹುದ್ದೆ ಬೇಕೆಂದೇನಿಲ್ಲ ಎಂದು ಹೇಳಿದರು.

    ಮಲ್ಲಿಕಾರ್ಜುನ ಖರ್ಗೆ ಅವರ ಈ ಘೋಷಣೆ ಸಭೆಯಲ್ಲಿ ಭಾಗವಹಿಸಿದ್ದ ಮಹಾಮೈತ್ರಿಯ ಅಂಗಪಕ್ಷಗಳಿಗೆ ಟಾನಿಕ್ ನೀಡಿದಂತಾಗಿದ್ದು,ಆ ಮೂಲಕ ಬೆಂಗಳೂರಿನ ಸಭೆ ನಿರ್ಣಾಯಕ ಹೆಜ್ಜೆ ಇಟ್ಟಂತಾಗಿದೆ.

     ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರವಿಟ್ಟು ತಲೆ ಎತ್ತುತ್ತಿದ್ದ ತೃತೀಯ ಶಕ್ತಿ ಇದೀಗ ಹೊಸ ರೂಪದಲ್ಲಿ ಮೇಲೆದ್ದು ನಿಲ್ಲಲು ಹವಣಿಸುತ್ತಿದ್ದು,ತಾನು ಕಾಂಗ್ರೆಸ್ ಜತೆ ಜತೆಗೇ ಹೆಜ್ಜೆ ಹಾಕುವ ನಿರ್ಧಾರಕ್ಕೆ ಬಂದಿದೆ.

     ಇದರ ಭಾಗವಾಗಿ ಇಂದು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು,ನಮಗೆ ಪ್ರಧಾನಿ ಹುದ್ದೆ ಬೇಕೆಂದೇನಿಲ್ಲ ಎನ್ನುವ ಮೂಲಕ ಮಹಾಮೈತ್ರಿ ಮತ್ತಷ್ಟು ಉತ್ಸಾಹದಿಂದ ಮುನ್ನಡಿ ಇಡಲು ದಾರಿ ಮಾಡಿಕೊಟ್ಟರು.

    ಅಂದ ಹಾಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಗೆಲುವು ಗಳಿಸಿದರೆ ಪ್ರಧಾನಿ ಹುದ್ದೆ ಪಡೆಯಲು ಹಲವು ನಾಯಕರು ಹಾತೊರೆಯುತ್ತಿದ್ದು,ಇಂತಹ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷ ನಾಯಕತ್ವದ ರೇಸಿನಿಂದ ಹಿಂದೆ ಸರಿದಿರುವುದು ಕುತೂಹಲಕಾರಿಯಾಗಿದೆ.

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ,ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಬಿಹಾರದ ಮುಖ್ಯಮಂತ್ರಿ,ಸAಯುಕ್ತ ಜನತಾದಳದ ನಾಯಕರಾದ ನಿತೀಶ್ ಕುಮಾರ್ ಮತ್ತು ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ,ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರಾದ ಶರದ್ ಪವಾರ್ ಅವರು ಪ್ರಧಾನಿ ಹುದ್ದೆಯ ರೇಸಿನಲ್ಲಿರುವುದು ಈಗ ರಹಸ್ಯವೇನಲ್ಲ.

      ಪ್ರಧಾನಿ ಹುದ್ದೆಯ ಮೇಲೆ ಈ ನಾಯಕರು ಕಣ್ಣಿಟ್ಟಿರುವ ಸಂದರ್ಭದಲ್ಲೇ ಮಹಾಮೈತ್ರಿಯ ಅತಿ ದೊಡ್ಡ ಶಕ್ತಿಯಾದ ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯ ರೇಸಿನಲ್ಲಿ ಭಾಗವಹಿಸಲು ಉತ್ಸುಕತೆ ತೋರದಿರುವುದು ಮಹಾಮೈತ್ರಿಗೆ ಇನ್ನಷ್ಟು ಬಲ ನೀಡಿದಂತಾಗಿದೆ.

     ಭವಿಷ್ಯದ ಪ್ರಧಾನಿ ಯಾರು ಎಂಬ ಪ್ರಶ್ನೆಯನ್ನು ಮುಖ್ಯವಾಗಿಟ್ಟುಕೊಳ್ಳದೆ ಮೊದಲು ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವಿಗೆ ಹೋರಾಡುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದ್ದು,ಈ ಲೆಕ್ಕಾಚಾರದ ಪ್ರಕಾರವೇ ಅದು ಮುಂದಡಿಯಿಡಲು ನಿರ್ಧರಿಸಿದೆ.

      ಮಹಾಮೈತ್ರಿಯ ಅತ್ಯಂತ ದೊಡ್ಡ ಶಕ್ತಿಯಾದ ತಾನೇ ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ನೇರವಾಗಿ ಹೇಳಿದರೆ,ಈ ಹುದ್ದೆಗೆ ಪೈಪೋಟಿ ನಡೆಯುವ ಬದಲು ಚುನಾವಣೆಯನ್ನು ಎದುರಿಸುವುದು ಮಹಾಮೈತ್ರಿಯ ಅಂಗಪಕ್ಷಗಳಿಗೆ ಅನುಕೂಲಕರವಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap