ಢಾಕಾ:
ಬಾಂಗ್ಲಾದೇಶದಲ್ಲಿ ನಡೆದ ಸೇನಾ ಜೆಟ್ ದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತವು ತಜ್ಞ ವೈದ್ಯರು ಮತ್ತು ದಾದಿಯರನ್ನು ಮಂಗಳವಾರ ರಾತ್ರಿ ಢಾಕಾಗೆ ಕಳುಹಿಸಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಉತ್ತರ ಪ್ರದೇಶದಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿಗೆ ಸೋಮವಾರ ಮಿಲಿಟರಿ ಜೆಟ್ ಅಪ್ಪಳಿಸಿದ ಸುಮಾರು 25 ಮಕ್ಕಳು ಸೇರಿದಂತೆ 31 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕರು ಗಾಯಗೊಂಡಿದ್ದಾರೆ. ಇವರಿಗೆ ಚಿಕಿತ್ಸೆ ನೀಡಲು ಮಂಗಳವಾರ ರಾತ್ರಿಯೇ ಭಾರತದಿಂದ ಸುಟ್ಟಗಾಯಗಳ ತಜ್ಞ ವೈದ್ಯರು ಮತ್ತು ದಾದಿಯರ ತಂಡವನ್ನು ಢಾಕಾಗೆ ಕಳುಹಿಸಿದೆ.
ಢಾಕಾದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಅಗತ್ಯ ವೈದ್ಯಕೀಯ ನೆರವು ನೀಡಲು ಸುಟ್ಟಗಾಯಗಳ ತಜ್ಞ ವೈದ್ಯರು ಮತ್ತು ದಾದಿಯರ ತಂಡವನ್ನು ಢಾಕಾಗೆ ಕಳುಹಿಸಲಾಗಿದೆ ಎಂದು ಹೇಳಿದೆ.
ತಂಡವು ರೋಗಿಗಳ ಸ್ಥಿತಿಯನ್ನು ನಿರ್ಣಯಿಸಿ, ಅಗತ್ಯವಿದ್ದವರಿಗೆ ಭಾರತದಲ್ಲಿ ಹೆಚ್ಚಿನ ಚಿಕಿತ್ಸೆ ಮತ್ತು ವಿಶೇಷ ಆರೈಕೆ ನೀಡಲು ಶಿಫಾರಸ್ಸು ಮಾಡಲಾಗುತ್ತದೆ. ಪ್ರಾಥಮಿಕ ಸ್ಥಿತಿಗತಿಯನ್ನು ಅವಲೋಕಿಸಿ ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ಢಾಕಾಗೆ ಕಳುಹಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವೈದ್ಯಕೀಯ ತಂಡದಲ್ಲಿ ದೆಹಲಿ ಮೂಲದ ವೈದ್ಯರಾದ ಲೋಹಿಯಾ ಆಸ್ಪತ್ರೆಯ ರಾಮ್ ಮನೋಹರ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಸೇರಿದ್ದಾರೆ. ಇವರು ನೀಡುವ ಶಿಫಾರಸುಗಳ ಆಧಾರದ ಮೇಲೆ ಭಾರತೀಯ ಆಸ್ಪತ್ರೆಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಮಾಡುವುದಾಗಿ ಭಾರತ ಹೇಳಿದೆ. ಸೇನಾ ಜೆಟ್ ಪತನದ ಕಾರಣವನ್ನು ನಿರ್ಧರಿಸಲು ಈಗಾಗಲೇ ಬಾಂಗ್ಲಾದೇಶ ವಾಯುಪಡೆಯು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ ಎನ್ನಲಾಗಿದೆ.
