ವಿಶೇಷ ವರದಿ : ಲಕ್ಷ್ಮೀ ಕಾಂತ್ ಜೆ ಸಿ.
ಅದೊಂದು ಕಾಲವಿತ್ತು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಬಹುತೇಕ ಭಾರತ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟ ಕಾಲವದು . ಆಗಿನ್ನೂ ಅಂಬೇಡ್ಕರ್- ಗಾಂಧಿಯಂತವರು ಹುಟ್ಟಿರದಿದ್ದ ಕಾಲಗಟ್ಟವದು.ವೃತ್ತಿಗೊಂದು ಜಾತಿ ಸೃಷ್ಟಿಯಾಗಿ ಭಾರತೀಯ ಸಮಾಜ ನೂರಾರು ತುಂಡುಗಳಾಗಿ ಒಡೆದು ಪರಸ್ಪರ ಹಗೆತನದಲ್ಲಿ ತೊಡಗಿದ್ದವು.
ಜಾತಿವ್ಯವಸ್ಥೆ ಸೃಷ್ಟಿಸಿದವರು ಪರಮೋಚ್ಛ ಸ್ಥಾನದಲ್ಲಿ ಕುಳಿತು ಜ್ಞಾನ ಹಾಗೂ ಅಧಿಕಾರವೆಂಬ ಎರಡೂ ಸಂಪನ್ಮೂಲಗಳ ಮೇಲೆ ಏಕಾಧಿಪತ್ಯ ಸಾಧಿಸಿದ್ದರು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದರು. ಮತ್ಯಾರಿಗೂ ವಿದ್ಯೆ ಕಲಿಯುವ ಅವಕಾಶ ಇಲ್ಲ ಎಂದರು ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಸಾಮಾಜಿಕ ಶೋಷಣೆಗೆ ಒಳಗಾಗಿದ್ದರು.
ಜಾತಿ ವ್ಯವಸ್ಥೆ ಹೆಮ್ಮರವಾಗಿ ಬೆಳೆದು ಶೂದ್ರರು ದಲಿತರು ಶಿಕ್ಷಣದಿಂದ ವಂಚಿತರಾಗಿದ್ದರು ಆ ವೇಳೆಗೆ ವಸಾಹತು ಶಾಹಿಗಳು ಭಾರತಕ್ಕೆ ಬಂದ ಕಾರಣ ಮಧ್ಯಮ ವರ್ಗದ ಕೆಲವು ಜನರು ಶಿಕ್ಷಣ ಪಡೆದರು ಆ ಮೂಲಕ 19ನೇ ಶತಮಾನದ ಕಾಲಘಟ್ಟದಲ್ಲಿ ಈ ನೆಲದ ಶೂದ್ರತಿ ಶೂದ್ರರಿಗೆ, ಹೆಣ್ಣು ಮಕ್ಕಳು, ದಲಿತರಿರು ಅನುಭವಿಸುವ ಅಸ್ಪೃಶ್ಯತೆ ಮತ್ತು ಅಸಮಾನತೆಯ ನೋವಿಗೆ ಕಾರಣ ಏನು?. ಅದಕ್ಕೆ ಪರಿಹಾರ ಏನು ಎಂಬುದು ಹುಡುಕಿ, ಅದಕ್ಕೆ ಶಿಕ್ಷಣವೊಂದೆ ಪರಿಹಾರ ಎಂದು ಶಾಲೆಗಳನ್ನು ಪ್ರಾರಂಭಿಸಲು ಮುಂದಾದ ಮಹಾನ್ ಚೇತನಗಳೇ ಸಾವಿತ್ರಿ ಬಾಯಿ ಫುಲೆ ದಂಪತಿಗಳು.
1831ರ ಜನವರಿ 3ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ್‌ನಲ್ಲಿ ಹಿಂದುಳಿದ ಮಾಲಿ ಸಮುದಾಯದ ರೈತ ಕುಟುಂಬದಲ್ಲಿ ಜನಿಸಿದ ಸಾವಿತ್ರಿಬಾಯಿ ಜಮೀನುದಾರ ಕುಟುಂಬಕ್ಕೆ ಸೇರಿದವರು ಅವರಿಗೆ ಶಿಕ್ಷಣ ದೊರೆತಿರಲಿಲ್ಲ ಆದರೆ ಗಂಡ ಜ್ಯೋತಿ ಬಾ ಫುಲೆಯವರು ಶಾಲೆ ಕಲಿಯದ ಜೀವನ ಸಂಗಾತಿಗೆ ತಾನೇ ಶಿಕ್ಷಕನಾಗಿ ಅಕ್ಷರ ಕಲಿಸಿದರು.
ಇದರ ಜೊತೆಗೆ ಜ್ಯೊತಿ ಬಾ ಫುಲೆಯವರಿಗೆ ತಮ್ಮ ಪತ್ನಿಯಂತೆ ಅಕ್ಷರ ಕಲಿಯದ ಅಸ್ಪೃಶ್ಯರಿಗೂ ಶಾಲೆ ತೆರೆಯುವ ಆಸೆ ಹುಟ್ಟಿತು 1824 ರಲ್ಲಿ ಮಿಷನರಿಗಳು ಮೊದಲ ಬಾಲಕಿಯ ಶಾಲೆಯನ್ನು ಮುಂಬಯಿನಲ್ಲಿ ತೆರೆದರು ಅದೇ ವರ್ಷ ಗಂಗೂಬಾಯಿ ಎಂಬಾಕೆ ಮುಂಬಯಿಯಲ್ಲಿ ಬಾಲಕಿಯ ಶಾಲೆಯನ್ನು ತೆರೆದರು ಕೆಲವೇ ತಿಂಗಳಲ್ಲಿ ಅದನ್ನು ಮುಚ್ಚಿ ಬೇಕಾಯಿತು ಈ ಶಾಲೆಯಲ್ಲಿ ಹೆಚ್ಚಾಗಿ ವಿದೇಶಿ ಶಿಕ್ಷಕ-ಶಿಕ್ಷಕಿಯರು ಶಿಕ್ಷಣ ಕಲಿಸುವ ಕಾರಣ ಭಾರತೀಯ ಜನ ಸಾಮಾನ್ಯರು ಆ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಿರಲಿಲ್ಲ.
ಜ್ಯೊತಿ ಬಾ ಫುಲೆಯವರು ಇದನ್ನೇಲ್ಲಾ ಗಮನಿಸುತ್ತಿದ್ದರು ಒಮ್ಮೆ ಗೆಳೆಯ ಸದಾಶಿವ ಗೊವಂದೆ ಕೆಲಸ ಮಾಡುವ ಅಹ್ಮದ್ ನಗರಕ್ಕೆ ಹೋದಾಗ ಅಲ್ಲಿನ ಫಾರ್ಮೂಲ್ ಸ್ಕೂಲಿಗೆ ಬೇಟಿ ನೀಡಿ ತಾನು ಕೂಡ ಶಾಲೆ ತೆರೆದು ದಲಿತ ಸಮುದಾಯದ ಮತ್ತು ಹೆಣ್ಣು ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಆಸೆ ಪಟ್ಟರು ಅತ್ತೆ ಸಗುಣಬಾಯಿ ಒತ್ತಾಸೆಯಂತೆ ಹೆಂಡತಿ ಸಾವಿತ್ರಿಯನ್ನು ಅಹ್ಮದ್ ನಗರದ ಮಿರ್ ಫರಾರ್ ಫಾರ್ಮೂಲಾ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆಯಲು ಕಳಿಸಿದರು ಅಲ್ಲಿ ಜ್ಯೊತಿ ಬಾ ಫುಲೆಯವರ ಗೆಳೆಯ ಉಸ್ಮಾನ್ ಶೇಕರಿ ಸಹೋದರಿ ಫಾತಿಮಾ ಶೇಕ್ ಎಂಬಾಕೆ ಕಲಿತರು. ಹೀಗೆ 17 ವರ್ಷ ತುಂಬುವುದರಲ್ಲಿ ಶಿಕ್ಷಣ ತರಬೇತಿ ಪಡೆದು ಭಾರತದ ಪ್ರಪ್ರಥಮ ಶಿಕ್ಷಕಿಯಾಗಿ ಹೊರ ಹೊಮ್ಮಿದರೆ ಫಾತಿಮಾ ಶೇಕ್ ಎಂಬುವರು ಮೊದಲ ಮುಸ್ಲಿಂ ಶಿಕ್ಷಕಿಯಾದರು.
ನಂತರ ಶಿಕ್ಷಕ ತರಬೇತಿ ಮುಗಿಸಿ ಸಾವಿತ್ರಿ ಬಾಯಿ ಕುಟುಂಬ ಪುಣೆಯ ದಲಿತ ಕೇರಿಯಲ್ಲಿ ವಾಸಿಸುತ್ತಾ 1849 ರಲ್ಲಿ ಮೊದಲ ಬಾಲಕಿಯರ ಶಾಲೆ ಭಿಡೆವಾಡಿಯಲ್ಲಿ ಆರಂಭಿಸಿದರು. ತಮ್ಮ ಮನೆಯಿಂದಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲಾರಂಭಿಸಿದರು. 1851 ದಲಿತರಿಗಾಗಿ ಪ್ರಥಮ ಶಾಲೆಯನ್ನು ತೆರೆದರು.ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು.
ಮುಂದೆ ಸಾಮಾಜಿಕ ಪ್ರತಿರೋಧಕ್ಕೆ ಮಣಿದ ಜ್ಯೋತಿಬಾ ಮನೆಯವರು, ಈ ದಂಪತಿಯನ್ನು ಹೊರಗೆ ಹಾಕಿದ ನಂತರ ಇವರಿಗೆ ಆಶ್ರಯ ನೀಡಿ ಬೆಂಬಲಕ್ಕೆ ನಿಂತವರು ಸ್ನೇಹಿತ ಉಸ್ಮಾನ್ ಶೇಖ್ ಕುಟುಂಬ. ಅವರ ತಂಗಿ ಫಾತಿಮಾ ಬೇಗಂ, ಸಾವಿತ್ರಿ. ಬಾಯಿಯೊಂದಿಗೆ ಶಿಕ್ಷಕ ತರಬೇತಿ ಪಡೆದು, ‘ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಯೆಂಬ ಹೆಗ್ಗಳಿಕೆ ಪಡೆದರು. ಆನಂತರ, ಇಬ್ಬರೂ ಸೇರಿಕೊಂಡು ಉಸ್ಮಾನ್ ಶೇಖ್ ಮನೆಯಿಂದಲೇ ಶಾಲೆ ಆರಂಭಿಸಿದರು. ಹೀಗೆ ಪ್ರಾರಂಭವಾದ ಅವರ ಶಿಕ್ಷಣ ಸೇವೆ 1848 ರಿಂದ 1852 ರ ಅವಧಿಯಲ್ಲಿ 15 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದು ನಿರ್ವಹಿಸಿದರು.
ಸಾವಿತ್ರಿ ಬಾಯಿ ಫುಲೆ ಅವರ ಶಿಕ್ಷಣ ಸೇವೆಯನ್ನು ಗುರುತಿಸಿದ ಆಗಿನ ಬ್ರಿಟಿಷ್ ಸರ್ಕಾರದ ಶಿಕ್ಷಣ ಇಲಾಖೆಯೂ ಸಾವಿತ್ರಿಬಾಯಿ ಅವರನ್ನು 1852ರಲ್ಲಿ ಅತ್ಯುತ್ತಮ ಶಿಕ್ಷಕಿ’ಯೆಂದು ಗೌರವಿಸಿತು. 1856ರ ಹೊತ್ತಿಗೆ ಅವರ ಶಾಲೆಗಳಲ್ಲಿ 258 ಜನರು ದಲಿತ ವಿದ್ಯಾರ್ಥಿಗಳು ಕಲಿಯುತ್ತಿದ್ದರು.
ಸತ್ಯಶೋಧಕ ಸಮಾಜದ ಅಧ್ಯಕ್ಷರಾಗಿ ಸೇವೆ : –
1860-70 ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು. ಸಾವಿತ್ರಿಬಾಯಿಯವರು 1873ರಲ್ಲಿ ಆರಂಭವಾದ ‘ಸತ್ಯೋಧಕ’ ಸಮಾಜದ ಅಧ್ಯಕ್ಷೆಯಾಗಿದ್ದರು.
19ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಯಾರ ಅಧಿಪತ್ಯವಿಲ್ಲದೆ ಪ್ರಕೃತಿಕದತ್ತವಾಗಿ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿಗೆ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗಿದೆ.
ಸತ್ಯಶೋಧಕ ಸಮಾಜವೆಂಬ ಸಂಸ್ಥೆಯನ್ನು ಆರಂಭಿಸಿ, ಶಿಕ್ಷಣ ಮತ್ತು ಸಮಾನತೆಯ ಅರಿವು, ವರದಕ್ಷಿಣೆ ವಿರೋಧಿ ಸರಳ ವಿವಾಹ, ಅಸ್ಪೃಶ್ಯರಿಗೆ ಕುಡಿಯುವ ನೀರಿನ ವ್ಯವಸ್ಥೆಯಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು. ಮಹಿಳಾ ಸೇವಾ ಮಂಡಳಿಗಳನ್ನು ಸ್ಥಾಪಿಸಿದ ಸಾವಿತ್ರಿಬಾಯಿ, ಬಾಲ್ಯವಿವಾಹ, ಹೆಣ್ಣುಭ್ರೂಣ ಹತ್ಯೆ ಹಾಗೂ ಸತಿ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನ ಸಂಘಟಿಸಿದರು. ‘ಬಾಲ್ಯತಾ ಪ್ರತಿಬಂಧಕ್ ಗೃಹ್” ಎಂಬ ಕೇಂದ್ರವನ್ನು ವಿಧವೆಯರು, ಅತ್ಯಾಚಾರಕ್ಕೆ ಒಳಗಾದವರು ಹಾಗೂ ಅವರ ಮಕ್ಕಳ ಸುರಕ್ಷತೆಗಾಗಿ ಸ್ಥಾಪಿಸಿದರು. ವಿಧವೆಯರ ಪುನರ್‌ವಿವಾಹಕ್ಕೆ ಬೆಂಬಲ ಕೊಟ್ಟರು.ಇವರು ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡು ವೈದ್ಯಕೀಯ ಶಿಕ್ಷಣ ಕೊಡಿಸಿ ಅಂತರ್ಜಾತಿ ವಿವಾಹ ಮಾಡಿಸಿದರು.
ಕವಯಿತ್ರಿಯಾಗಿ ಸಾಧನೆ
1890ರಲ್ಲಿ ಜ್ಯೋತಿಬಾ ನಿಧನರಾದಾಗ, ವಿರೋಧದ ನಡುವೆ ಗಂಡನ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿ ಹೊಸ ಮುನ್ನುಡಿ ಬರೆದರು. ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿ ಎರಡು ಕಾವ್ಯಸಂಗ್ರಹಗಳಾದ ‘ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನ ಮತ್ತು ಎರಡನೇಯ ಕೃತಿ ‘ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) 1891 ರಲ್ಲಿ ಪ್ರಕಟಿಸಿದರು.
ಪ್ಲೇಗ್ ರೋಗಿಗಳಿಗೆ ಸೇವೆ
ಮಹಾರಾಷ್ಟ್ರವು 1897ರಲ್ಲಿ ಪ್ಲೇಗ್ ನಿಂದ ತತ್ತರಿಸಿದಾಗ, ಮಗ ಯಶ್ವಂತ್ ನೊಂದಿಗೆ ಉಚಿತ ಆಸ್ಪತ್ರೆ ಪ್ರಾರಂಭಿಸಿ, ರೋಗಿಗಳ ಆರೈಕೆ ಮಾಡಿದರು. ಸಸಾನೆ ಅವರ ಹೊಲದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಸಾವಿತ್ರಿ ರೋಗಿಗಳನ್ನು ಕರೆತರುತ್ತಿದ್ದರು. ಒಂದು ಹಳ್ಳಿಯಲ್ಲಿ ನೋಡುವವರಿಲ್ಲದೆ ಮನೆಯಲ್ಲಿ ನರಳುತ್ತಿದ್ದ ದಲಿತ ಮಗುವನ್ನು ಹೆಗಲ ಮೇಲೆ ಹೊತ್ತು ತಂದು ಚಿಕಿತ್ಸೆ ಕೊಡಿಸಿದರು. ಹೀಗೆ ದಣಿವರಿಯದೆ ರೋಗಿಗಳ ಶುಶೂಷೆ ಮಾಡಿದ ಸಾವಿತ್ರಿ ಅವರಿಗೆ ಪ್ಲೇಗ್ ತಗುಲಿತು. ಐದು ದಶಕ ಕಾಲ ಜನರ ನಡುವೆ ಸೇವೆ ಮಾಡುತ್ತ ಬದುಕು ಸವೆಸಿದ ಜೀವ ಮಾರ್ಚ್ 10, 1897ರಲ್ಲಿ ಕಾಲದಲ್ಲಿ ಲೀನವಾಯಿತು.
ಒಟ್ಟಾರೆಯಾಗಿ ಸಾವಿತ್ರಿಬಾಯಿ ಫುಲೆ ಅವರು ಶೋಷಿತ ಸಮುದಾಯಗಳಿಗೆ ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಕಡೆಗಣಿಸಿದ ಕಾಲದಲ್ಲಿ ನ್ಯಾಯ ಒದಗಿಸಿದ ದಾರಿದೀಪ ಮತ್ತು ಧೈರ್ಯದ ಸಂಕೇತವಾಗಿದ್ದು ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರಿಗೆ ಮಾದರಿಯಾಗಿದ್ದಾರೆ.