ನವದೆಹಲಿ:
ಇಂಡಿಗೋ ವಿಮಾನದ ಪೈಲಟ್ ಒಬ್ಬರಿಗೆ ಕೆಲಸದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ. ಇಂಡಿಗೋದ ತರಬೇತಿ ಪೈಲಟ್ ಒಬ್ಬರು, ಮೂವರು ಹಿರಿಯ ಅಧಿಕಾರಿಗಳು ತನ್ನ ಜಾತಿಯನ್ನು ಅವಮಾನಿಸಿದ್ದಾರೆ ಹಾಗೂ ವಿಮಾನ ಹಾರಿಸಲು ನೀನು ಯೋಗ್ಯನಲ್ಲ ಹೋಗಿ ಬೂಟುಗಳನ್ನು ಹೊಲಿ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ 35 ವರ್ಷದ ವ್ಯಕ್ತಿ ಪೊಲೀಸ್ ದೂರು ದಾಖಲಿಸಿದ್ದಾರೆ. ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರುದಾರರು ಮೊದಲು ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿದರು. ಅಲ್ಲಿನ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದಾರೆ – ಅಪರಾಧ ಎಲ್ಲಿ ನಡೆದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಿಸಬಹುದು. ಈ ಎಫ್‌ಐಆರ್ ಅನ್ನು ಈಗ ಇಂಡಿಗೋ ಪ್ರಧಾನ ಕಚೇರಿ ಇರುವ ಗುರುಗ್ರಾಮಕ್ಕೆ ರವಾನಿಸಲಾಗಿದೆ. ಈ ವಿಷಯದ ಬಗ್ಗೆ ಇಂಡಿಗೋ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತರಬೇತಿ ಪೈಲಟ್ ತಮ್ಮ ದೂರಿನಲ್ಲಿ, ಏಪ್ರಿಲ್ 28 ರಂದು ಇಂಡಿಗೊದ ಗುರುಗ್ರಾಮ್ ಕಚೇರಿಯಲ್ಲಿ ನಡೆದ ಸಭೆಯನ್ನು ಉಲ್ಲೇಖಿಸಿದ್ದಾರೆ. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, “ನೀವು ವಿಮಾನ ಹಾರಿಸಲು ಯೋಗ್ಯರಲ್ಲ ಹೋಗಿ ನಿಮ್ಮ ಮೂಲ ಕಸುಬು ಚಪ್ಪಲಿ ಹೊಲಿಯಿರಿ. ನೀವು ಇಲ್ಲಿ ಕಾವಲುಗಾರನಾಗಲು ಸಹ ಅರ್ಹರಲ್ಲ ಎಂದು ಎಲ್ಲರೆದುರು ಅವಮಾನ ಮಾಡಿದ್ದಾರೆ. ತನಗೆ ಕಿರುಕುಳ ನೀಡಿದ್ದು, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಈ ವಿಷಯವನ್ನು ಉನ್ನತ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿಯೊಂದಿಗೆ ಪ್ರಸ್ತಾಪಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಬೇಕಂತಲೇ ಕೆಲವು ಬಾರಿ ತನಗೆ ವೇತನ ಕಡಿತವನ್ನು ಮಾಡಲಾಗಿದೆ. ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಹಾಗೂ ತರಬೇತಿ ಅವಧಿಯಲ್ಲಿ ಸಾಕಷ್ಟು ತೊಂದರೆಗಳನ್ನು ನೀಡಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.
