ಸದ್ದು ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ!

ತುಮಕೂರು:


ಸಚಿವರು, ಮೇಯರ್ ಹೆಸರು ತಳಕು | ತಪ್ಪುಮಾಡಿಲ್ಲ, ತನಿಖೆಗೆ ಸಿದ್ಧವೆಂದ ಮೇಯರ್

ರಾಜ್ಯದಲ್ಲಿ ಸದ್ದು ಮಾಡಿರುವ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ ಆರೋಪದಲ್ಲಿ ಸಚಿವರು, ತುಮಕೂರು ಪಾಲಿಕೆ ಮೇಯರ್ ಹೆಸರು ತಳಕು ಹಾಕಿಕೊಂಡಿದೆ, ಆದರೆ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದರ ಹಿಂದೆ ಷಡ್ಯಂತ್ರ್ಯವಿದೆ ಎಂದು ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹೌದು ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದಿರುವ ಕಂಪನಿಯ ಮಾಜಿ ನೌಕರ ಶ್ರೀಧರ್, ಎಂಬಾತ ನಕಲಿ ಬಿಲ್‍ಗೆ ಹಣಪಾವತಿಸಲು ಸಚಿವರಿಗೆ 45 ಲಕ್ಷ , ಮೇಯರ್ ಅವರಿಗೆ 5 ಲಕ್ಷ ಕಿಕ್‍ಬ್ಯಾಕ್ ಕೊಡಲಾಗಿದೆ ಎಂದು ನೇರ ಆರೋಪ ಮಾಡಿರುವುದು ಮಾಧ್ಯಮ, ಜಾಲತಾಣಗಳಲ್ಲಿ ವೈರಲ್ ಆಗಿದ್ದು, 2ಕೋಟಿಯವರೆಗೆ ಭ್ರಷ್ಟಾಚಾರ ನಡೆದಿದೆ ಎಂದು ದೂರಿರುವುದು ಸಂಚಲನಕ್ಕೆ ಕಾರಣವಾಗಿದೆ.

ಆದರೆ ಈ ಆರೋಪವನ್ನು ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ, ಆರೋಗ್ಯಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಒಕ್ಕೊರಲನಿಂದ ನಿರಾಕರಿಸಿದ್ದು, ತುಮಕೂರು ನಗರದಲ್ಲಿ 4 ಇಂದಿರಾ ಕ್ಯಾಂಟೀನ್ ನಡೆಯುತ್ತಿದ್ದು, ಕ್ಯಾಂಟೀನ್ ಗುತ್ತಿಗೆಯಾಗಲೀ, ಬಿಲ್ ಪಾವತಿ ಮಾಡುವ ಯಾವ ಕಾರ್ಯವನ್ನು ಪಾಲಿಕೆ ಮಾಡುತ್ತಿಲ್ಲ.

ಕ್ಯಾಂಟೀನ್‍ನಲ್ಲಿ ಆಹಾರ ವಿತರಣೆಗೆ ಸಂಬಂಧಿಸಿದಂತೆ ಬಿಲ್ ಮೊತ್ತದ ಶೇ.70ರಷ್ಟನ್ನು ಪಾಲಿಕೆ ಭರಿಸುತ್ತಿದೆ. ಉಳಿದ ಶೇ.30ರಷ್ಟು ಹಣವನ್ನು ಜಿಲ್ಲಾಡಳಿತ ಭರಿಸಿ ಗುತ್ತಿಗೆದಾರರಿಗೆ ಹಣ ಪಾವತಿಸುತ್ತದೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಆರೋಪವನ್ನು ಸಾರಸಗಾಟಾಗಿ ತಳ್ಳಿ ಹಾಕಿದ್ದಾರೆ.

ವಾಸ್ತವ ಸಂಖ್ಯೆ ಆಧರಿಸಿಯೇ ಬಿಲ್‍ಪಾವತಿ:

ಇಂದಿರಾ ಕ್ಯಾಂಟೀನ್‍ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆನ್ನುವ ಕಾರಣಕ್ಕೆ ಹಿಂದೆ ಗುತ್ತಿಗೆ ಪಡೆದಿದ್ದವರ ಅವಧಿ ಮುಗಿದಕೂಡಲೇ ಹೊಸದಾಗಿ ರಿವರ್ಟ್ ಸಂಸ್ಥೆ ಆಹಾರ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದು ಪಾರದರ್ಶಕ ಟೆಂಡರ್ ಮೂಲಕವೇ ಈ ಗುತ್ತಿಗೆಯನ್ನು ಜಿಲ್ಲಾಡಳಿತ ನೀಡಿದೆ.

ತುಮಕೂರು ನಗರದಲ್ಲಿ ಪಾಲಿಕೆ ಬಳಿ, ಜೆ.ಸಿ.ರಸ್ತೆ, ಶಿರಾಗೇಟ್ ಕನಕ ವೃತ್ತ ಹಾಗೂ ಕ್ಯಾತ್ಸಂದ್ರ ಆರೋಗ್ಯ ಕೇಂದ್ರದ ಪಕ್ಕ ಇಂದಿರಾ ಕ್ಯಾಂಟೀನ್ ನಡೆಯುತ್ತಿದ್ದು, ಜೆ.ಸಿ.ರಸ್ತೆ, ಮಹಾವೀರಭವನದ ಪಕ್ಕದ ಕ್ಯಾಂಟೀನ್‍ನಲ್ಲಿ ಮಾತ್ರ ಬೆಳಿಗ್ಗೆ ಮಧ್ಯಾಹ್ನ ಹೆಚ್ಚು ಊಟ ವಿತರಣೆಯಾಗುತ್ತಿದೆ.

ರಾತ್ರಿ ಸಮಯ ಎಲ್ಲಾ ಕ್ಯಾಂಟೀನ್‍ಗಳಲ್ಲಿ ನಿಗದಿತ 500ಕ್ಕಿಂತ ಕಡಿಮೆಯೇ ಆಹಾರ ಪೂರೈಕೆಯಾಗುತ್ತಿದ್ದು, ವಾಸ್ತವ ಸಂಖ್ಯೆಯನ್ನು ಆಧರಿಸಿಯೇ ಬಿಲ್ ಪಾವತಿ ಮಾಡಲಾಗುತ್ತಿದೆ. ನಮ್ಮ ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಆಹಾರ ಗುಣಮಟ್ಟ, ಪೂರೈಕೆಯ ಅಂಕಿ-ಸಂಖ್ಯೆಯನ್ನು ಪರಿಶೀಲಿಸುತ್ತಿದ್ದು, ಯಾವುದೇ ಲೋಪಕ್ಕೆ ಆಸ್ಪದವಾಗಿಲ್ಲ ಎಂದು ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದರು.

ಆರೋಪಿತ ಗುತ್ತಿಗೆ ಸಂಸ್ಥೆಯಲ್ಲಿ ಅವ್ಯವಹಾರ ಮಾಡಿ ಹೊರಹೋಗಿರುವವನು:

ಸಚಿವರು, ನನ್ನ ಮೇಲೆ ಆರೋಪ ಕೇಳಿಬಂದ ಕೂಡಲೇ ಇಂದಿರಾಕ್ಯಾಂಟೀನ್ ಗುತ್ತಿಗೆ ಪಡೆದ ಸಂಸ್ಥೆಯವರೆಗೆ ಕರೆಮಾಡಿ ವಿಚಾರಿಸಿದೆ. ಆರೋಪಿಸಿರುವ ವ್ಯಕ್ತಿ ಸಂಸ್ಥೆಯ ಮಾಜಿ ನೌಕರನಾಗಿದ್ದು, ಅಲ್ಲಿ ಹಣಕಾಸಿನ ವಿಚಾರದಲ್ಲಿ ತಪ್ಪೆಸಗಿ ಸಂಸ್ಥೆಯಿಂದ ಹೊರಬಿದ್ದಿದ್ದಾನೆಂದು ಸಂಸ್ಥೆಯವರೇ ಸ್ಪಷ್ಟಪಡಿಸಿದ್ದು, ಈ ಕುರಿತು ರೆಕಾರ್ಡ್ ಇದೆ.

ಸಂಸ್ಥೆ ಮುಖ್ಯಸ್ಥರೊಂದಿಗೆ ವೈಮನಸ್ಯ ಮಾಡಿಕೊಂಡು ಗುತ್ತಿಗೆ ಸಂಸ್ಥೆ ವಿರುದ್ಧ ಪಿತೂರಿಗೆ ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ. ಆತನ ಹೇಳಿಕೆಯನ್ನು ವಿಡಿಯೋದಲ್ಲಿ ಗಮನಿಸಿದ್ದೇನೆ. ಇಂದಿರಾ ಕ್ಯಾಂಟೀನ್ ಗುತ್ತಿಯಲ್ಲಾಗಲೀ, ಬಿಲ್ ಪಾವತಿಯಲ್ಲಾಗಲೀ ಮೇಯರ್ ಪಾತ್ರವಿರುವುದಿಲ್ಲ. ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸುತ್ತದೆ ಎಂದು ಮೇಯರ್ ಕೃಷ್ಣಪ್ಪ ಹೇಳಿದ್ದಾರೆ.

ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸ್ಥಾಪಿಸಲ್ಪಟ್ಟ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುವ ಕ್ಯಾಂಟೀನ್ ಎನಿಸಿದೆ. ಹಿಂದೆ ಗುತ್ತಿಗೆ ಪಡೆದಿದ್ದ ಸಂಸ್ಥೆ ಸಮರ್ಪಕವಾಗಿ ಆಹಾರ ಪೂರೈಸುತ್ತಿಲ್ಲವೆಂಬ ದೂರು ವ್ಯಾಪಕವಾಗಿತ್ತು. ಅವರ ಅವಧಿ ಮುಗಿದ ಕೂಡಲೇ ಮತ್ತೊಂದು ಸಂಸ್ಥೆ ಗುತ್ತಿಗೆ ಪಡೆದಿದ್ದು, ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಆಹಾರ ಪೂರೈಸುತ್ತಿದೆ. ದಿನವೊಂದಕ್ಕೆ 2000 ಟೋಕನ್ ಗುರಿಯಿದ್ದರೂ ಅಷ್ಟು ಮೊತ್ತಕ್ಕೆ ಬಿಲ್ ಮಾಡುತ್ತಿಲ್ಲ.

ಅಧಿಕಾರಿಗಳು ಪರಿಶೀಲಿಸಿ 1000-1200 ಆಹಾರ ಸರಬರಾಜಿಗೆ ಮಾತ್ರ ಪಾಲಿಕೆ ಅನುದಾನ ಮಂಜೂರು ಮಾಡುತ್ತಿದೆ. ಆರೋಪದಲ್ಲಿ ಸ್ಪಷ್ಟತೆಯಿಲ್ಲ. ಸಚಿವರ ಮೇಲೂ ಆರೋಪಿಸಲಾಗಿದೆ. ಮೇಯರ್ ಹೆಸರನ್ನು ಎಳೆದು ತಂದಿರುವುದು ಪಾಲಿಕೆಗೆ ಕೆಟ್ಟ ಹೆಸರು ತರುವ ಷಡ್ಯಂತ್ಯ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ತಿಳಿಸಿದ್ದಾರೆ.

ಒಟ್ಟಾರೆ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ ಆರೋಪ ತುಮಕೂರು ಮಹಾನಗರಪಾಲಿಕೆಯಲ್ಲಿ ನಾಗರಿಕ ವಲಯದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ನಗರದ ಮೊದಲ ಪ್ರಜೆಯ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ, ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಬಡವರ ಊಟದಲ್ಲಿ ಹಣ ಮಾಡಬೇಕಿಲ್ಲ:

ನನ್ನ ಮೇಯರ್ ಅವಧಿ 1 ತಿಂಗಳು ಮಾತ್ರ ಬಾಕಿ ಇದ್ದು, ಯಾವುದೇ ವಿವಾದವಿಲ್ಲದೆ ಸುಸೂತ್ರ 11 ತಿಂಗಳು ಆಡಳಿತ ನಡೆಸಿದ್ದೇನೆ. ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ ಆರೋಪದ ಹಿಂದೆ ಷಡ್ಯಂತ್ರಗಳ ಅನುಮಾನವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತೇಜೋವಧೆಗೆ ಕಾರಣವಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಎಸ್ಪಿಗೆ ದೂರು ನೀಡಿರುವೆ.

ಯಾವುದೇ ತನಿಖೆ ಎದುರಿಸಲು ಸಿದ್ಧನಿರುವೆ. ಬಡವರ ಊಟದಲ್ಲಿ ಹಣಮಾಡಬೇಕಾದ ಪ್ರಮೇಯ ನನಗಿಲ್ಲ. ಸೇವೆ ಮಾಡಲು ನನಗೆ ರಾಜಕೀಯ ಮಾತ್ರವಲ್ಲ, ಸಹಕಾರಿ, ಸಾಂಸ್ಕøತಿಕ ಕ್ಷೇತ್ರಗಳೂ ಇವೆ.

– ಬಿ.ಜಿ.ಕೃಷ್ಣಪ್ಪ, ಮೇಯರ್ ಮಹಾನಗರಪಾಲಿಕೆ.

ಕಳಪೆ ಊಟವಾಯ್ತು, ಇದೀಗ ಕಿಕ್‍ಬ್ಯಾಕ್ ಸರದಿ

ಇಂದಿರಾ ಕ್ಯಾಂಟೀನ್ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿದ್ದು, ಕೇವಲ 5, 10ರೂ.ಗೆ ತಿಂಡಿ, ಊಟ ಒದಗಿಸಿ ಬಡವರ ಹೊಟ್ಟೆತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಕಳಪೆ ಊಟ ಪೂರೈಸಲಾಗುತ್ತಿದೆ ಎಂಬ ದೂರು ಆಗಿಂದಾಗ್ಗೆ ಕೇಳಿ ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ.

ಮೊದಲ ಮೂರು ವರ್ಷದ ಅವಧಿಗೆ ಗುತ್ತಿಗೆ ಪಡೆದಿದ್ದ ರಶ್ಮಿ ಹಾಸ್ಪಿಟಲಿಟಿ ಟೆಂಡರ್ ಅವಧಿ ಮುಗಿದ ಮೂಡಲೇ ಬೇರೆ ಸಂಸ್ಥೆಗಳಿಗೆ ಗುತ್ತಿಗೆ ವಹಿಸಲಾಯಿತು. ಇದೀಗ ಗುತ್ತಿಗೆ ನೀಡುವಲ್ಲಿ, ಬಿಲ್‍ಪಾವತಿಸುವಲ್ಲಿ ಕಿಕ್ ಬ್ಯಾಕ್ ಗಂಭೀರ ಆರೋಪಗಳು ಗುತ್ತಿಗೆ ಪಡೆದ ಸಿಬ್ಬಂದಿ,

ಮಾಜಿ ಸಿಬ್ಬಂದಿಗಳು ಕೇಳಿಬರುತ್ತಿರುವುದು ಗಂಭೀರವಿಷಯವಾಗಿದ್ದು, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಇದು ಕೇವಲ ತುಮಕೂರು ಮಹಾನಗರಪಾಲಿಕೆಯೊಂದರ ಮೇಲಿನ ಆರೋಪ ಮಾತ್ರವಲ್ಲ. ಜಿಲ್ಲೆಯ ಇತರೆ ಭಾಗದ ಕ್ಯಾಂಟೀನ್‍ಗಳು, ಹೊರ ಜಿಲ್ಲೆಯಲ್ಲೂ ಇಂತಹ ಹಗರಣಗಳು ನಡೆದಿರುವ ಸಾಧ್ಯತೆಯಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ.

ಟೋಕನ್ ಬದಲು ಬಯೋಮೆಟ್ರಿಕ್ ವ್ಯವಸ್ಥೆ ಬರಲಿ

ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರದಲ್ಲಿ ಟೋಕನ್ ಹೆಸರಲ್ಲಿ ಗೋಲ್‍ಮಾಲ್ ಕೇಳಿಬರುತ್ತಿದ್ದು, ಟೋಕನ್ ಬದಲಾಗಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿ ಊಟ ಪಡೆಯುವವರ ಥಂಬ್ ಇಂಪ್ರೆಷನ್ ಪಡೆದರೆ ಪಾರದರ್ಶಕ ಲೆಕ್ಕ ಸಿಗುತ್ತದೆ. ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಭ್ರಷ್ಟಾಚಾರ ತಡೆಯಬೇಕಿದೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap