KIAನಲ್ಲಿ ಇಂದಿನಿಂದ ಇಂದಿರಾ ಕ್ಯಾಂಟೀನ್‌ ಆರಂಭ…..!

ಬೆಂಗಳೂರು

    ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್‌ ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾರಂಭಗೊಳ್ಳಲಿದೆ.

    ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಿ-7 ಪಾರ್ಕಿಂಕ್‌ ಪ್ರದೇಶ ಟರ್ಮಿನಲ್‌ 1 ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.

    ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುಷಿ ಹಂಚಿಕೊಂಡಿದ್ದು, ‘ನಗರ ಪ್ರದೇಶಗಳಲ್ಲಿ ಬಡಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಒದಗಿಸುವ ಜನಪರ ಕಾಳಜಿಯೊಂದಿಗೆ ನಾವು ಜಾರಿಗೆ ತಂದಿದ್ದ ಯೋಜನೆ ಇಂದಿರಾ ಕ್ಯಾಂಟೀನ್. ಈ ಯೋಜನೆ ಇಂದು ರಾಜ್ಯಾದ್ಯಂತ ನಿತ್ಯ ಲಕ್ಷಾಂತರ ಬಡಜನರ ಹಸಿವು ನೀಗಿಸುವ ತನ್ನ ಉದ್ದೇಶವನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸುತ್ತಿದೆ.’

    ‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಬ್ ಚಾಲಕರು, ಕಾರ್ಮಿಕರು ಮತ್ತು ಸುತ್ತಲಿನ ಬಡಜನರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಇಂದು ನೂತನ ಇಂದಿರಾ ಕ್ಯಾಂಟೀನನ್ನು ಲೋಕಾರ್ಪಣೆಗೊಳಿಸುತ್ತಿದ್ದೇವೆ. ನಮ್ಮ ಈ ಇಂದಿರಾ ಕ್ಯಾಂಟೀನ್ ಮತ್ತಷ್ಟು ಹಸಿದ ಜೀವಗಳಿಗೆ ಘನತೆಯ ಆಹಾರ ನೀಡಲಿ ಎಂಬ ಹಾರೈಕೆ ನನ್ನದು’ ಎಂದಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕು ಎನ್ನುವುದು ಕ್ಯಾಬ್ ಚಾಲಕರ ಸಂಘದ ಬಹುದಿನಗಳ ಬೇಡಿಕೆಯಾಗಿತ್ತು. ಕ್ಯಾಬ್ ಮತ್ತು ಆಟೋ ಚಾಲಕರ ಸಂಘದ ಒಕ್ಕೂಟವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದ 36 ಬೇಡಿಕೆಗಳಲ್ಲಿ ಇದು ಕೂಡ ಒಂದಾಗಿತ್ತು. ಹೀಗಾಗಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಈ ಭರವಸೆ ನೀಡಿದ್ದು, ಇದೀಗ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಇಂದಿರಾ ಕ್ಯಾಂಟೀನ್‌ನನ್ನು ಲೋಕಾರ್ಪಣೆಗೊಳಿಸುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link