ದಾವಣಗೆರೆ:
ಬಡವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ರಾಜ್ಯದಲ್ಲಿ 186 ಇಂದಿರಾ ಕ್ಯಾಂಟಿನ್‌ಗಳಿಗೆ ಮರುಚಾಲನೆ ನೀಡಲಾಗಿದ್ದು, ಮಾಂಸಾಹಾರದ ಬೇಡಿಕೆಯ ವಿಚಾರವೂ ನಮ್ಮ ಮುಂದಿದೆ. ಸದ್ಯ ಮೊಟ್ಟೆ ಕೊಡಬೇಕು ಅನ್ನುವ ಚಿಂತನೆ ಇದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್ ಗಳಿಗೆ ಈಗ ಮರುಚಾಲನೆ ನೀಡಲಾಗಿದ್ದು, ಅಲ್ಲಿ ಮಾಂಸಾಹಾರ ಬೇಕೆಂಬ ಬೇಡಿಕೆ ಇದೆ. ಮೊಟ್ಟೆಯಿಂದ ಪ್ರೋಟಿನ್ ಕೂಡ ಸಿಗುತ್ತೆ. ಆದ್ದರಿಂದ ಮೊಟ್ಟೆ ಕೊಡುವ ಚಿಂತನೆ ಇದೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಸಿಎಂ, ಡಿಸಿಎಂ ಬಡವರ ಸಲುವಾಗಿ ಹಲವು ಕೆಲಸ ಮಾಡಿದ್ದಾರೆ. ಸಿಎಂ ಅವರ ಕನಸಿನ ಪ್ರಾಜೆಕ್ಟ್ ಇಂದಿರಾ ಕ್ಯಾಂಟಿನ್, ನಮ್ಮ ಅವಧಿಯಲ್ಲಿ ಕ್ಯಾಂಟಿನ್ ಸರಿಯಾಗಿ ನಡೀತಿತ್ತು, ಆದರೆ, ಆಮೇಲೆ ಬಂದ್ ಆಯಿತು, ಈಗ ಮತ್ತೆ ಶುರು ಮಾಡಲಾಗಿದ್ದು,ಬಡವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ್ದು, ಐದು ಗ್ಯಾರಂಟಿ ಯೋಜನೆ ಹೊರತು ಪಡಿಸಿ ಇಂದಿರಾ ಕ್ಯಾಂಟೀನ್ ಕೂಡ ಗ್ಯಾರಂಟಿಯಾಗಿದೆ ಎಂದು ಹೇಳಿದರು.
ಕೇಂದ್ರ ವಕ್ಫ್ ಬಿಲ್ ತಿದ್ದುಪಡಿ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಗುಟ್ಕಾ, ಸಿಗರೇಟ್, ಮದ್ಯ ನಿಷೇಧ ಬಿಲ್ ತರಬೇಕು, ಕುಡಿತದಿಂದ ಹಲವು ಕುಟುಂಬ ಹಾಳಾಗಿದೆ. ಅದನ್ನ ಬಿಟ್ಟು ಬೇರೆ ಏನೇನೋ ಬಿಲ್ ತರ್ತಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.ನಟ ಕಮಲ್ ಹಾಸನ್ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷ ಸ್ಪಷ್ಟವಾಗಿದೆ. ಕಮಲ್ ಹಾಸನ್ ಕ್ಷೆಮೆ ಕೇಳಬೇಕು, ಇಲ್ಲವಾದರೆ ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಕೋಮು ಸೌಹಾರ್ಧ ವೇದಿಕೆಯಿಂದ ಹಿಂದೂಗಳ ಟಾರ್ಗೆಟ್ ಆಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು, ಕೆಲ ಮಧ್ಯಮಗಳು ದಾರಿ ತಪ್ಪಿಸುತ್ತಿವೆ. ರಾಜ್ಯದಲ್ಲಿ ನೂರರಷ್ಟು ಕಾನೂನು ಸುವ್ಯವಸ್ಥೆ ಹದ್ದುಬಸ್ತಿಗೆ ತರಲು ಕೆಲಸ ಮಾಡಲಾಗಿದೆ. ಸಂವಿಧಾನ ಪರವಾಗಿ ಕೆಲಸ ಮಾಡುತ್ತಿದ್ದೇವೆ ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ ಎಂದರು.
