ಮೈಸೂರು:
ನಾಡಿನ ಪರಂಪರೆ ಮತ್ತು ಸಾಂಪ್ರದಾಯಿಕ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಬುಧವಾರ ಬೆಳಗ್ಗೆ 7.05ರಿಂದ 7.30ಕ್ಕೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಚಾಲನೆ ನೀಡಿದರು.
ಇದಕ್ಕೂ ಮುನ್ನ ಸುಧಾಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಗ್ಗೆ 10 ಗಂಟೆಗೆ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಪ್ರತಿದಿನವೂ ಬೆಳಗ್ಗೆ 10 ಮತ್ತು ಸಂಜೆ 7 ಗಂಟೆಗೆ 20 ನಿಮಿಷಗಳ ವರೆಗೆ ಖಾಸಗಿ ದರ್ಬಾರ್ ನಡೆಯಲಿದೆ.
ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ಸಚಿವ ಸಾ.ರಾ ಮಹೇಶ್,ಜಿ.ಟಿ.ದೇವೇಗೌಡ, ಶಾಸಕ ಎಸ್.ಎ.ರಾಮ್‌ದಾಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ