ಒಳಗೆ ಪರಿಸರ ಪಾಠದ ಪುಂಗಿ ಹೊರಗೆ ಮರಗಳಿಗೆ ಕೊಡಲಿ

ತಿಪಟೂರು:

       ಶಿಕ್ಷಕರು, ಎಸ್‍ಡಿಎಂಸಿ ನಿರ್ಧಾರಕ್ಕೆ ವೃಕ್ಷಗಳು ಬಲಿ  ಪ್ರಕೃತಿ ಪ್ರಿಯರ ಆಕ್ರೋಶ

     ಪುಟ್ಟ ಗ್ರಾಮವಾದ ಶಿಡ್ಲೆಹಳ್ಳಿಯ ಸುಂದರ ಹಸಿರು ಪರಸರದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ಮುಕುಟದಂತಿದ್ದ ಮರಗಳು ಕೊಡಲಿ ಪೆಟ್ಟಿಗೆ ಧರೆಗುರುಳಿದ್ದು ಶಾಲಾ ಆವರಣ ಹಾಳು ಕೊಂಪೆಯಂತೆ ಕಾಣುತ್ತಿದೆ.

ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಕರಡಿ ಗ್ರಾಪಂಗೆ ಸೇರಿದ ಶಿಡ್ಲೇಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 15 ಮಕ್ಕಳು ಹಾಗೂ ಇಬ್ಬರು ಶಿಕ್ಷಕರಿದ್ದು, ಶಾಲಾ ಆವರಣವು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೇ ಈ ಸುಂದರ ಪರಿಸರದ ಮೇಲೆ ಯಾರ ಕೆಟ್ಟದೃಷ್ಠಿ ಬಿತ್ತೊ, ಸುಂದರ ಪರಿಸಿರ ಸಂಪೂರ್ಣವಾಗಿ ಹಾಳಾಗಿದ್ದು, ಸಮಾರು 2 ದಶಕಗಳಾದರೂ ಇಂತಹ ಪರಿಸರವನ್ನು ಮತ್ತೊಮ್ಮೆ ನಿರ್ಮಿಸಲು ಸಾಧ್ಯವೆ ಇಲ್ಲ ಎನ್ನಬಹುದು.

50 ಸಾವಿರಕ್ಕೆ ಮರಗಳ ವ್ಯಾಪಾರ :

ಶಾಲೆಯ ಗೇಟ್ ತೆರೆದರೆ ಹಾದಿಯ 2 ಬದಿಯಲ್ಲಿ ಹಸಿರಾಗಿ ನಿಂತಿದ್ದ ಅಶೋಕ ವೃಕ್ಷಗಳು ಎಂತಹವರನ್ನು ಮುದಗೊಳಿಸುವಂತೆ ಶಾಲೆಯ ಅಂದವನ್ನು ಹೆಚ್ಚಿಸಿದ್ದವು. ಶಾಲೆಯ ಆವರಣದ ಸುತ್ತಲು ಸಿಲ್ವರ್ ವೃಕ್ಷಗಳಿದ್ದು ಶಾಲೆಗೆ ತಂಪು ವಾತಾವರಣವನ್ನು ಕೊಡುತ್ತಿದ್ದವು. ಜೊತೆಗೆ 20 ಕ್ಕೂ ಹೆಚ್ಚು ತೆಂಗಿನ ಮರಗಳಿದ್ದು, ಅಕ್ಷರ ದಾಸೋಹಕ್ಕೆ ತೆಂಗಿನಕಾಯಿ ಒದಗಿಸುತ್ತಿದ್ದವು.

ಆದರೇ ಶಾಲೆಯ ಪಕ್ಕದ ಮನೆಯವರು ನಮ್ಮ ಮನೆಗೆ ಮರದ ಬೇರು ಬಂದು ಮನೆಗೆ ತೊಂದರೆಯಾಗುತ್ತಿದೆ ಎಂದು ಶಾಲೆಯ ಮುಖ್ಯ ಶಿಕ್ಷರಿಗೆ ಹಾಗೂ ಎಸ್‍ಡಿಎಂಸಿಗೆ ಅರ್ಜಿ ಸಲ್ಲಿಸಿದ್ದೆ ತಡ ಎಸ್‍ಡಿಎಂಸಿಯವರು ಸಭೆ ಸೇರಿ ಮರ ಕಡಿಯಲು ಅನುಮೋದನೆ ನೀಡಿ ಸುಮಾರು 50 ಸಾವಿರ ರೂ.ಗಳಿಗೆ ಅರಳಗುಪ್ಪೆಯ ವ್ಯಾಪಾರಿಗೆ ಮರಗಳನ್ನು ಮಾರಿದ್ದಾರೆ ಎನ್ನಲಾಗಿದ್ದು ಪ್ರಕರಣವು ಈಗ ವಿವಾದಕ್ಕೆ ಗುರಿಯಾಗಿದೆ.

ಘೋಷಣೆಯಲ್ಲೆ ಉಳಿದ ಪರಿಸರದ ಉಳಿವು :

ಹಸಿರೇ ಉಸಿರು, ಕಾಡು ಬೆಳೆಸಿ-ನಾಡು ಉಳಿಸಿ, ಮನೆಗೊಂದು ಮರ, ಊರಿಗೊಂದು ವನ ಎಂಬ ಘೋಷಣೆಗಳನ್ನು ಪರಿಸರ ದಿನದಂದು ಕೂಗಿ ಈಗ ಶಾಲೆಯ ಪರಿಸರವನ್ನೆ ಹಾಳುಮಾಡಿದ ಶಿಕ್ಷಕರು ಮತ್ತು ಎಸ್‍ಡಿಎಂಸಿ ಮಂಡಳಿಯವರಿಗೆ ಯಾರು ಶಿಕ್ಷಿಸುತ್ತಾರೆ ಮತ್ತು ಪರಿಸರವನ್ನು ಉಳಿಸಿ ಎಂದು ಘೋಷವಾಕ್ಯ ಕೂಗುವ ಶಾಲಾ ಆವರಣದಲ್ಲಿಯೆ ಮರಗಳಿಗೆ ಕೊಡಲಿ ಹಾಕಿದರೆ ಮುಂದಿನ ಪೀಳಿಗೆಯ ಮಕ್ಕಳಿಗೆ ಉತ್ತಮ ಪರಿಸರವನ್ನು ಕೊಡುವುದು ಹೇಗೆ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಮರ ಕಡಿದು ನಂತರ ಅನುಮತಿಗೆ ಅರ್ಜಿ..! :

ಸರ್ಕಾರಿ ಜಾಗದಲ್ಲಿ ಮರಗಳನ್ನು ಕತ್ತರಿಸಬೇಕೆಂದರೆ ಮೊದಲಿಗೆ ಸಂಭಂದಪಟ್ಟ ಇಲಾಖೆಗಳಿಗೆ ಸುದ್ದಿ ತಿಳಿಸಿ ಅನಮತಿ ಪಡೆದು ನಂತರ ಅರಣ್ಯ ಇಲಾಖೆಗೆ ಅರ್ಜಿ ಕೊಡಬೇಕು. ನಂತರ ಅವರು ಬಂದು ಮರಗಳಿಂದ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಪರಿಶೀಲಿಸಿ ಮರ ಕತ್ತರಿಸಲು ಅನುಮತಿ ನೀಡಬೇಕು. ನಂತರ ದಿನಪತ್ರಿಕೆಯಲ್ಲಿ ಟೆಂಡರ್ ಜಾಹೀರಾತು ನೀಡಿ ಹರಾಜಿನಲ್ಲಿ ಮರಗಳನ್ನು ಮಾರಾಟ ಮಾಡಿ ನಂತರ ಕಡಿಯಬೇಕು ಇದು ನಿಯಮ.

ಆದರೆ ಈ ಯಾವುದೆ ಕ್ರಮಗಳನ್ನು ಅನುಸರಿಸದೆ ಏಕಾಏಕಿ ಮರಗಳನ್ನು ಕತ್ತರಿಸಿ ಈಗ ಬಿಇಓ ಕಚೇರಿಗೆ ಘಟೋನೋತ್ತರ ಅನುಮತಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯವರು ಶನಿವಾರ ಸ್ಥಳ ಪರೀಶೀಲಿಸಿ ಮರಗಳನ್ನು ಅಳತೆ ಮಾಡಿ ಲೆಕ್ಕ ತೆಗೆದುಕೊಂಡು ಹೋಗಿದ್ದು, ಮುಂದಿನ ಆದೇಶದವರೆಗೂ ಮರಗಳು ಶಾಲಾ ಆವರಣದಲ್ಲಿಯೆ ಇರಲಿ ಎಂದು ಆದೇಶ ಮಾಡಿರುತ್ತಾರೆ.

ಇದ್ಯಾವ ನ್ಯಾಯ…? : ಮನೆಯ ಅಡಿಪಾಯಕ್ಕೆ ಮರಗಳ ಬೇರು ನುಗ್ಗಿ ಮನೆಗೆ ಅಪಾಯವಾಗಿದೆ ಎಂದು ದೂರು ನೀಡದಾಗ ಮನೆಯ ಪಕ್ಕದಲ್ಲಿದ್ದ ಮರವನ್ನು ಅಥವಾ ಅದರ ಬೇರನ್ನೊ ಕತ್ತರಿಸಿದ್ದರೆ ಸಾಕಾಗಿತ್ತು. ಅದನ್ನು ಬಿಟ್ಟು ಶಾಲಾ ಆವರಣದೊಳಗಿದ್ದ 6 ಸಿಲ್ವರ್ ಹಾಗೂ 8 ಅಶೋಕ ವೃಕ್ಷಗಳನ್ನು ಕತ್ತರಿಸಿರುವುದು ಯಾವ ನ್ಯಾಯ ಎಂದು ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರ ನಿರ್ಧಾರಕ್ಕೆ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಶಿಕ್ಷಣ ಸಚಿವರ ತವರಿನಲ್ಲಿಯೆ ದುರ್ಘಟನೆ :

ಮರಗಳನ್ನು ತೆರವುಗೊಳಿಸಿವುದಕ್ಕೆ ಶಾಲಾ ಎಸ್‍ಡಿಎಂಸಿ ಮಂಡಳಿಯು ಮಾಡಿರುವ ಸಭಾ ನಡಾವಳಿಯ ಪ್ರತಿಯನ್ನು ಕೊಡಿ ಎಂದು ಕೇಳದಿದರೆ ಶಿಕ್ಷಕ ನಾಗರಾಜು ಅವರು ಸಭಾ ನಾಡಾವಳಿಯ ಪುಸ್ತಕ ಮನೆಯಲ್ಲಿದೆ ಎನ್ನುತ್ತಾರೆ ಈ ಬಗ್ಗೆ ಶಾಲೆಗೆ ಹೋಗಿ ಮಾಹಿತಿ ಪಡೆಯೋಣವೆಂದರೆ ಶಿಕ್ಷಕರು ಕಚೇರಿಯ ಕೆಲಸವಿದೆ ಎಂದು ಹೇಳಿ ಮಧ್ಯಾಹ್ನ 3 ಗಂಟೆಗೂ ಮುಂಚೆಯೆ ಶಾಲೆಯಿಂದ ಹೋಗಿರುತ್ತಾರೆ. ಸ್ವತಹ ಶಿಕ್ಷಣ ಸಚಿವರ ತವರಿನಲ್ಲಿಯೆ ಇಂತಹ ಘಟನೆಗಳು ನಡೆಯುತ್ತಿದ್ದರೆ ಹೇಗೆ ಎಂಬುದು ತಿಳಿಯುತ್ತಿಲ್ಲ.

ಶಿಡ್ಲೇಹಳ್ಳಿ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಮರಗಳನ್ನು ಕತ್ತರಿಸಿರುವ ಬಗ್ಗೆ ದೂರು ಬಂದಿದ್ದು, ಶಿಕ್ಷಕರಿಗೆ ನೋಟೀಸ್ ನೀಡಲಾಗಿದೆ. ಅನುಮತಿ ಇಲ್ಲದೇ ಮರಗಳನ್ನು ಕಡಿಯಬಾರದಿತ್ತು, ಈಗ ಘಟನೋತ್ತರ ವರದಿ ಸಲ್ಲಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ.

-ಬಿ.ಜೆ.ಪ್ರಭುಸ್ವಾಮಿ, ಬಿಇಓ

          ಶಿಡ್ಲೇಹಳ್ಳಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಡಿದಿರುವ ಮರಗಳನ್ನು ಪರಿಶೀಲಿಸಿ ಇಲಾಖೆಯ ವಶಕ್ಕೆ ಪಡೆಯಲಾಗಿದ್ದು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

-ಜಗದೀಶ್, ಆರ್‍ಎಫ್‍ಓ

ಶಾಲೆಯ ಆವರಣದಲ್ಲಿದ್ದ ಮರಗಳನ್ನು ಕಡಿಯಲು ಇಲಾಖೆಯ ಅನುಮತಿ ಪಡೆಯಬೇಕೆಂಬುದು ನಮಗೆ ತಿಳಿದಿರಲಿಲ್ಲ. 3-4 ಜನರನ್ನು ವಿಚಾರಿಸಿ ಹೆಚ್ಚಿನ ಬೆಲೆ ನೀಡಿದವರಿಗೆ ಮರಗಳನ್ನು ಕಡಿಯಲು ಅನುಮತಿ ನೀಡಿದೆವು.

-ಭರತ್, ಎಸ್‍ಡಿಎಂಸಿ ಅಧ್ಯಕ್ಷ

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap