ಚಿಕ್ಕನಾಯಕನಹಳ್ಳಿ:
ಸಂಘಟನೆಗಳಿಂದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಆಗ್ರಹ
73ನೇ ಗಣರಾಜ್ಯೋತ್ಸವ ಆಚರಣೆಯ ವೇಳೆ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ನಮ್ಮ ದೇಶದ ಸಂವಿಧಾನಕ್ಕೆ ಮಾಡಿರುವ ಅವಮಾನವಾಗಿದೆ, ಈ ವ್ಯಕ್ತಿಯನ್ನು ಕೂಡಲೇ ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸಿ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಮಾದಿಗ ದಂಡೋರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಸಂವಿಧಾನವನ್ನು ನೀಡಿದಂತಹ ಮಹಾನ್ ನಾಯಕರಾದ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವÀ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ನಡತೆ ಸರಿಯಿಲ್ಲ ಕೂಡಲೇ ಇವರ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಜೆ.ಸಿ.ಪುರ ಗೋವಿಂದರಾಜು, ಕೆಂಪರಾಜು, ರಂಗಸ್ವಾಮಿ, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.ತಹಸೀಲ್ದಾರ್ ತೇಜಸ್ವೀನಿ ಅವರು ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರು.
ನ್ಯಾಯಧೀಶ ಹುದ್ದೆಯಿಂದ ವಜಾಮಾಡಿ :
ತಾಲ್ಲೂಕು ದಲಿತ ಸಂಘಟನೆಯ ಸಂಚಾಲಕ ಸಿ.ಎಸ್.ಲಿಂಗದೇವರು ಮಾತನಾಡಿ, ಎಲ್ಲರಿಗೂ ನ್ಯಾಯ ಹೇಳುವ ವ್ಯಕ್ತಿ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವಂತಹವರು ಈ ರೀತಿಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹೇಳಿಕೆ ನೀಡುವುದು ಹಾಗೂ ಅವರ ಭಾವಚಿತ್ರಕ್ಕೆ ಮಾಡಿರುವ ಅವಮಾನವನ್ನು ದಲಿತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಕೂಡಲೇ ನ್ಯಾಯಾಧೀಶ ಸ್ಥಾನದಿಂದ ವಜಾಮಾಡಬೇಕು ಎಂದು ಒತ್ತಾಯಿಸಿದರು.
ಇಡೀ ವಿಶ್ವವೇ ಗೌರವ ನೀಡುವಂತಹ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಸರ್ಕಾರವೇ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಗಣರಾಜ್ಯೋತ್ಸವ ಆಚರಣೆ ಮಾಡುವಂತೆ ತಿಳಿಸಿದ್ದರೂ ನ್ಯಾಯಾಧೀಶರು ಭಾವಚಿತ್ರವನ್ನು ತೆಗೆಯುವಂತೆ ಹೇಳಿರುವುದು ಖಂಡನಾರ್ಹ. ಅಲ್ಲದೇ ಪ್ರಕರಣದ ಬಗ್ಗೆ ಈಗ ಸಮರ್ಥಿಸಿಕೊಂಡಿರುವುದು ಸರಿಯಲ್ಲ.
-ಬೇವಿನಹಳ್ಳಿ ಚನ್ನಬಸವಯ್ಯ, ಪ್ರಧಾನ ಕಾರ್ಯದರ್ಶಿ, ರಾಜ್ಯ ಮಾದಿಗ ದಂಡೋರ ಸಂಘಟನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ