ಬೆಂಗಳೂರು:
ಪಕ್ಷದ ನಾಯಕನ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಶಮನಗೊಳಿಸಿ, ಮುಂಬರುವ ಲೋಕಸಭೆಯಲ್ಲಿ ರಾಜ್ಯ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆದ್ಯತೆ ನೀಡುತ್ತೇನೆಂದು ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಅವರ ಪುತ್ರ ಎನ್ನುವುದಕ್ಕಿಂತ ಹೆಚ್ಚಾಗಿ ಹೈಕಮಾಂಡ್ ನನ್ನನ್ನು ಯುವ ನಾಯಕ ಎಂದು ಪರಿಗಣಿಸಿ ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದೆ. ಬಿಜೆಪಿ ದೊಡ್ಡ ಪಕ್ಷವಾಗಿದ್ದು, ನಾಯಕರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಅಂತಹ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪರಿಹರಿಸುವುದು ನನ್ನ ಆದ್ಯತೆಯಾಗಿದೆ, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆಯುವುದು ನನ್ನ ಕರ್ತವ್ಯ. ರವಿ ಅಣ್ಣ (ಸಿ.ಟಿ.ರವಿ) ಅವರೊಂದಿಗೆ ಮಾತನಾಡಿದ್ದೇನೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿ.ಸೋಮಣ್ಣ ಅವರೊಂದಿಗೂ ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಗೋವಿಂದ್ ಕಾರಜೋಳ, ಬಿ.ಶ್ರೀರಾಮುಲು ಸೇರಿದಂತೆ ಹಿರಿಯ ಮುಖಂಡರ ಸಮ್ಮುಖದಲ್ಲಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತೇನೆಂದೂ ತಿಳಿಸಿದರು.
ಇನ್ನು ನವೆಂಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಬೇಕಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ರಾಷ್ಟ್ರೀಯ ನಾಯಕರು ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಸಮಾವೇಶನವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ