ವಾಷಿಂಗ್ಟನ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.ಅಮೆರಿಕ ಆಡಳಿತ ಯಂತ್ರದ ಜೀವನಾಡಿ, ಶ್ವೇತಭವನಕ್ಕೆ ಮಾರಣಾಂತಿಕ ವಿಷವನ್ನು ಲಕೋಟೆಯ ಮೂಲಕ ಕಳುಹಿಸಲಾಗಿದ್ದು ಅದನ್ನು ಅಧಿಕಾರಿಗಳು ಪತ್ತೆಹಚ್ಚಿ ಅನಾಹುತ ತಪ್ಪಿಸಿದ್ದಾರೆ.
ಲಕೋಟೆಯ ಮೂಲಕ ಕಳುಹಿಸಲಾದ ವಸ್ತು ರಿಸಿನ್, ಎಂಬ ಮಾರಣಾಂತಿಕ ವಿಷ ಎಂದು ಗುರುತಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಹೊದಿಕೆಯ ಮೇಲೆ ನಡೆಸಿದ ಪರೀಕ್ಷೆಗಳು ಮಾರಕ ವಿಷದ ವಸ್ತುವನ್ನು ಗುರುತಿಸಿವೆ.
ಅಧ್ಯಕ್ಷ ಟ್ರಂಪ್ ಹೆಸರಲ್ಲಿ ಬಂದ ಈ ಪತ್ರದ ಕುರಿತು ಅನುಮಾನ ಬಂದ ಕೂಡಲೇ ಪತ್ರವನ್ನು ವಶಪಡಿಸಿಕೊಂಡ ಯುಎಸ್ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ರಿಸಿನ್ ವಿಷದ ಅಂಶಗಳು ಪತ್ತೆಯಾಗಿವೆ. ಸದ್ಯ ಪತ್ರದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಿರುವ ಯುಎಸ್ ಸಿಕ್ರೇಟ್ ಸರ್ವೀಸ್, ಇದಕ್ಕಾಗಿ ಅಂಚೆ ಇಲಾಖೆಯ ನೆರವು ಕೋರಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು, ಶ್ವೇತಭವನಕ್ಕೆ ರಿಸಿನ್ ವಿಷದ ಅಂಶವಿರುವ ಪತ್ರವನ್ನು ರವಾನಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.