ಪುಟಿನ್ ವಿರೋಧಿ ಅಲೆಕ್ಸಿ ಮೇಲೆ ರಾಸಾಯನಿಕ ದಾಳಿ..!

ಬರ್ಲಿನ್‌:

    ಸೈಬೀರಿಯಾದಿಂದ ರಷ್ಯಾ ರಾಜಧಾನಿ ಮಾಸ್ಕೋಗೆ ಮರಳುವಾಗ ದಾರಿ ಮಧ್ಯೆ ವಿಮಾನದಲ್ಲಿ ಏಕಾಏಕಿ ಅಸ್ವಸ್ಥರಾಗಿದ್ದ ಅಲೆಕ್ಸಿ ನವಲ್ನಿ ಮೇಲೆ ರಾಸಾಯನಿಕ ದಾಳಿ ನಡೆದಿತ್ತು ಎಂದು ಜರ್ಮನಿ ಹೇಳಿದೆ. ಅವರಿಗೆ ನೊವಿಚೋಕ್ ಗುಂಪಿಗೆ‌ ಸೇರಿದ ಮಾರಣಾಂತಿಕ ರಾಸಾಯನಿಕ ನೀಡಲಾಗಿತ್ತು ಎಂದು ಹೇಳಿರುವ ಜರ್ಮನಿ ಈ ಸಂಬಂಧ ವಿವರಣೆ ನೀಡುವಂತೆ ರಷ್ಯಾ ಸರಕಾರಕ್ಕೆ ಸೂಚಿಸಿದೆ.

     ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕಟು ಟೀಕಾಕಾರರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ರಾಸಾಯನಿಕ ದಾಳಿ ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಂದಹಾಗೆ ಈ ನೊವಿಚೋಕ್‌ ಎನ್ನುವುದು ರಷ್ಯಾದ ವಿಜ್ಞಾನಿಗಳು 1970-90ರ ಅವಧಿಯಲ್ಲಿ ಕಂಡು ಹಿಡಿದ ರಾಸಾಯನಿಕ ಅಸ್ತ್ರಗಳಾಗಿದ್ದು, ಈ ಹಿಂದೆ ದೇಶದಕ್ಕೆ ಸಂಬಂಧಿಸಿದ ಹಲವರ ಕೊಲೆಯಲ್ಲಿ ಬಳಕೆಯಾಗಿದ್ದವು. ಇದೇ ಗುಂಪಿನ ರಾಸಾಯನಿಕವೀಗ ಅಲೆಕ್ಸಿ ನವಲ್ನಿ ದೇಹದಲ್ಲಿ ಪತ್ತೆಯಾಗಿದೆ.

     44 ವರ್ಷದ ನವಲ್ನಿ ಕೋಮಾದಲ್ಲಿದ್ದು ಆರಂಭದಲ್ಲಿ ರಷ್ಯಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಂತರ ಸಾಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ ಅವರನ್ನು ಜರ್ಮನಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಅಲೆಕ್ಸಿ ನವಲ್ನಿ ರಷ್ಯಾದಲ್ಲಿ ರಾಸಾಯನಿಕ ದಾಳಿಗೆ ಗುರಿಯಾಗಿದ್ದಾರೆ ಎಂಬ ವಿಚಾರ ಆಘಾತಕಾರಿಯಾಗಿದೆ,” ಎಂದು ಜರ್ಮನಿ ಸರಕಾರದ ವಕ್ತಾರ ಸ್ಟೀಫನ್‌ ಸೀಬರ್ಟ್‌ ಹೇಳಿದ್ದಾರೆ.

     ಸರಕಾರ ಈ ದಾಳಿಯನ್ನು ಕಟುವಾಗಿ ಖಂಡಿಸುತ್ತಿದ್ದು, ರಷ್ಯಾ ಸರಕಾರ ತುರ್ತಾಗಿ ಈ ಘಟನೆ ಬಗ್ಗೆ ವಿವರಣೆ ನೀಡಬೇಕು ಎಂದು ಜರ್ಮನಿ ಹೇಳಿದೆ. ಸ್ವತಃ ಜರ್ಮನಿಯ ಸೇನೆ ನವಲ್ನಿ ಚಿಕಿತ್ಸೆಯ ಜವಾಬ್ದಾರಿ ಹೊತ್ತಿದೆ. ನವಲ್ನಿ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದೆ ಎಂದು ಜರ್ಮನಿ ಹೇಳಿದೆ, ಆದರೆ ಅವರಿನ್ನೂ ಕೋಮಾದಲ್ಲಿಯೇ ಮುಂದುವರಿದಿದ್ದು, ವೆಂಟಿಲೇಟರ್‌ ಆಶ್ರಯದಲ್ಲಿದ್ದಾರೆ.

     2018ರಲ್ಲಿ ಇದೇ ರೀತಿಯ ದಾಳಿ ಬ್ರಿಟನ್‌ನಲ್ಲೂ ನಡೆದಿತ್ತು. ರಷ್ಯಾ ಗುಪ್ತಚರ ಇಲಾಖೆ ಕೆಜಿಬಿ ಏಜೆಂಟ್‌ ಸರ್ಗಿ ಕ್ರಿಪಾಲ್‌ ಮತ್ತು ಅವರ ಪುತ್ರಿಯ ಮೇಲೆ ಇದೇ ಮಾದರಿಯ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ನೀಡುವಂತೆ ಜರ್ಮನಿ ಬ್ರಿಟನ್‌ನ್ನು ಸಂಪರ್ಕಿಸಿದೆ. ಜೊತೆಗೆ ಈ ಸಂಬಂಧ ನ್ಯಾಟೋ ಹಾಗೂ ಯುರೋಪ್‌ ಒಕ್ಕೂಟದ ದೇಶಗಳಿಗೂ ಮಾಹಿತಿ ನೀಡುವುದಾಗಿ ಜರ್ಮನಿ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap