ಇಸ್ಲಾಮಾಬಾದ್:
ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪಾಕಿಸ್ತಾನದ ವಿರೋಧ ಪಕ್ಷಗಳು ಒತ್ತಾಯ ಮಾಡಿವೆ. ಅಷ್ಟೇಅಲ್ಲದೇ, ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ಮೈತ್ರಿಕೂಟವನ್ನು ರಚನೆ ಮಾಡಿವೆ
ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ನಡೆದ ಸಭೆಯಲ್ಲಿ 26 ಅಂಶಗಳನ್ನು ಒಳಗೊಂಡ ಜಂಟಿ ನಿರ್ಣಯ ಕೈಗೊಳ್ಳಲಾಗಿದ್ದು, ಪಾಕಿಸ್ತಾನ ಫೀಪಲ್ಸ್ ಪಾರ್ಟಿ (ಪಿಪಿಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್–ಎನ್), ಜಮಾಯಿತ್ ಉಲೆಮಾ ಇ ಇಸ್ಲಾಂ ಫಾಜಿಲ್ (ಜೆಯುಐ–ಎಫ್) ಹಾಗೂ ಇತರೆ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು.
ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಯುಐ–ಎಫ್ ಮುಖ್ಯಸ್ಥ ಮೌಲಾನಾ ಫಾಜಿಲ್ ಉರ್ ರೆಹಮಾನ್ ಅವರು ಈ ನಿರ್ಣಯವನ್ನು ಓದಿದರು. ಅಕ್ಟೋಬರ್ ತಿಂಗಳಿನಿಂದ ಆಡಳಿತರೂಢ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ವಿರುದ್ಧ ಜನಾಂದೋಲನವು ಆರಂಭವಾಗಲಿದೆ ಎಂದಿದ್ದಾರೆ
ನಿರ್ಣಯದ ಅನುಸಾರ, ಹಂತ, ಹಂತವಾಗಿ ಪ್ರತಿಭಟನೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 4 ಪ್ರಾಂತ್ಯಗಳಲ್ಲಿ ಜಾಥಾ, ಎರಡನೇ ಹಂತದಲ್ಲಿ (ಡಿಸೆಂಬರ್) ದೇಶದಾದ್ಯಂತ ಪ್ರತಿಭಟನಾ ಸಭೆ ನಡೆಯಲಿವೆ. ಅಂತಿಮವಾಗಿ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್ಗೆ ಜಾಥಾ ಹೊರಡಲಿದ್ದು, ಚಳವಳಿಯನ್ನು ತೀವ್ರಗೊಳಿಸಲಾಗುತ್ತದೆ.ಮತ್ತೆ ಚುನಾವಣೆ ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾದ ಅಗತ್ಯ ಸುಧಾರಣಾ ಕ್ರಮಗಳ ಜಾರಿ ಆಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.