ಇರಾನ್‌ ವಿರುದ್ಧ ಸೈಬರ್ ದಾಳಿ ಆರಂಭಿಸಿದ ಅಮೆರಿಕ

ವಾಷಿಂಗ್ಟನ್

     ಅಮೆರಿಕದ ಕಣ್ಗಾವಲು ಡ್ರೋನ್‌ ಅನ್ನು ಇರಾನ್ ಹೊಡೆದುರುಳಿಸಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕ ಇರಾನ್‌ನ ಕ್ಷಿಪಣಿ ನಿಯಂತ್ರಣ ವ್ಯವಸ್ಥೆಗಳ ವಿರುದ್ಧ ಸೈಬರ್ ದಾಳಿ ನಡೆಸಿದೆ ಎಂದು ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.

      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ ಸೈಬರ್ ದಾಳಿಯನ್ನು ರಾಕೆಟ್ ಮತ್ತು ಕ್ಷಿಪಣಿ ಉಡಾವಣಾ ವಾಹಕಗಳನ್ನು ನಿಯಂತ್ರಿಸಲು ಬಳಸುವ ಇರಾನ್‌ನ ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ನಡೆಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

      ಅಮೆರಿಕ ಸೆಂಟ್ರಲ್ ಕಮಾಂಡ್‌ನ ಸಮನ್ವಯದೊಂದಿಗೆ ಅಮೆರಿಕ ಸೈಬರ್ ಕಮಾಂಡ್ ಗುರುವಾರ ರಾತ್ರಿ ದಾಳಿಯನ್ನು ಆರಂಭಿಸಿದೆ ಎಂದು ವರದಿ ತಿಳಿಸಿದೆ. ಇರಾನ್‌ನಿಂದ ಎದುರಾಬಹುದಾದ ಸೈಬರ್ ದಾಳಿಯ ಬಗ್ಗೆ ಎಚ್ಚರದಿಂದ ಇರುವಂತೆ ಕೈಗಾರಿಕಾ ಅಧಿಕಾರಿಗಳಿಗೆ ಅಮೆರಿಕ ಸರ್ಕಾರ ಶನಿವಾರ ಸೂಚಿಸಿದೆ.

       ಇರಾನ್ ವಿರುದ್ಧ ಪ್ರತೀಕಾರವಾಗಿ ನಡೆಸಲು ಉದ್ದೇಶಿಸಿದ್ದ ಸೇನಾ ದಾಳಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಶುಕ್ರವಾರ ದೃಡಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಭವನೀಯ ಸಾವುನೋವುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ.

       ಆದರೂ, ಇರಾನ್ ವಿರುದ್ಧ ಮುಂದಿನ ದಿನಗಳಲ್ಲಿ ಸೇನಾ ದಾಳಿಯ ಸಾಧ್ಯತೆಗಳನ್ನು ಅವರು ತಳ್ಳಿಹಾಕಿಲ್ಲ. ವಿಷಯ ಬಗೆಹರೆಯುವವರೆಗೆ ಸೇನಾ ಕ್ರಮ ಎಂದಿಗೂ ಪರಿಗಣನೆಯಲ್ಲೇ ಇರುತ್ತದೆ ಎಂದು ಟ್ರಂಪ್‌ ಎಂದು ಟ್ರಂಪ್‌ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅಮೆರಿಕ ಅನುಮತಿಸುವುದಿಲ್ಲ ಎಂದು ಟ್ರಂಪ್ ಅನೇಕ ಬಾರಿ ಪ್ರತಿಪಾದಿಸಿದ್ದಾರೆ.

       ಸೇನಾ ದಾಳಿ ನಡೆಸಿದರೆ ಅಮೆರಿಕಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಸೇನೆ ಎಚ್ಚರಿಕೆ ನೀಡಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

        ಕಳೆದ ವಾರ ಓಮನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ ನಂತರ ಸೈಬರ್‌ ದಾಳಿ ವಿಷಯದಿಂದ ಅಮೆರಿಕ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap