ಪೋರ್ಟ್ ಬ್ಲೇರ್:
ಸುಮಾರು ಸಾವಿರ ವರ್ಷಗಳಿಂದ ನಾಡಿನ ಜನರ ಸಂಪರ್ಕವೇ ಇಲ್ಲದೆ ಬದುಕುತ್ತಿರುವ ಸೆಂಟಿನಲ್ ಬುಡಕಟ್ಟು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್- ನಿಕೋಬಾರ್‌ನಲ್ಲಿ ನಡೆದಿದೆ .
27 ವರ್ಷದ ಜಾನ್ ಅಲ್ಲೆನ್ ಚಾವು ಹತ್ಯೆಗೀಡಾದ ಮತಪ್ರಚಾರಕ. ಈತನನ್ನು ಉತ್ತರ ಸೆಂಟಿನೆಲ್ ದ್ವೀಪಕ್ಕೆ ಕರೆದೊಯ್ದಿದ್ದ 7 ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಮಗೆ ಸುಮಾರು 25 ಸಾವಿರ ಹಣ ಕೊಟ್ಟಿದ್ದ ಎಂದು ಮೀನುಗಾರರು ಬಾಯಿಬಿಟ್ಟಿದ್ದಾರೆ . ನ.16ರಂದು ಮೀನುಗಾರರ ಜತೆ ದೋಣಿಯಲ್ಲಿ ದ್ವೀಪದ ಸನಿಹಕ್ಕೆ ಹೋಗಿದ್ದ ಜಾನ್, ಪುಟ್ಟದೋಣಿಯಲ್ಲಿ ಏಕಾಂಗಿಯಾಗಿ ದ್ವೀಪ ತಲುಪಿದ್ದ. ಈತನನ್ನು ನೋಡುತ್ತಲೇ ಆದಿವಾಸಿಗಳು ಏಕಾಏಕಿ ಬಿಲ್ಲುಗಳಿಂದ ದಾಳಿ ಮಾಡಿದರು.
ಜಾನ್‌ಗೆ ಹಲವಾರು ಬಾಣಗಳು ಚುಚ್ಚಿಕೊಂಡವು. ಆದರೂ ಆತ ಓಡಿ ಬರದೆ, ಮುಂದೆ ಹೆಜ್ಜೆ ಹಾಕುತ್ತಾ ಹೋದ. ಜಾನ್ ಕುತ್ತಿಗೆಗೆ ಹಗ್ಗ ಬಿಗಿದ ಆದಿವಾಸಿಗಳು, ಆತನ ದೇಹವನ್ನು ಎಳೆದೊಯ್ದರು. ಇದನ್ನು ಕಂಡು ಮೀನುಗಾರರು ವಾಪಸ್ ಬಂದುಬಿಟ್ಟರು. ಮರುದಿನ ಹೋಗಿ ನೋಡಿದಾಗ ತೀರದಲ್ಲಿ ಜಾನ್ ದೇಹ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.