ವಿಶ್ವ ಪ್ರವಾಸೋದ್ಯಮದ ಮೇಲೆ ಕೊರೋನಾ ಕರಿನೆರಳು..!

ವಾಷಿಂಗ್ಟನ್:

       ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪ್ರವಾಸೋಧ್ಯಮ ವಲಯದಲ್ಲಿ ಕೋಟ್ಯಂತರ ಉದ್ಯೋಗ ನಷ್ಟ ಸಂಭವಿಸಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ.

    ಕೊರೋನಾ ವೈರಸ್ ಹಾವಳಿಯಿಂದಾಗಿ ಇಂದು ದೊಡ್ಡ ಹೊಡೆತ ಬಿದ್ದಿರುವುದು ಜಗತ್ತಿನ ಪ್ರವಾಸೋದ್ಯಮಕ್ಕೆ.ವಿಶ್ವಾದ್ಯಂತ ವಿಮಾನಯಾನ ಮತ್ತು ಹಡಗುಯಾನ ಸೇವೆಗಳು ಸಂಪೂರ್ಣ ಬಂದ್ ಆಗಿದ್ದು, ಪ್ರವಾಸೋದ್ಯಮದ ಸ್ವರ್ಗ ಎಂದೇ ಹೇಳಲಾಗುತ್ತಿದ್ದ ಸ್ಪೈನ್‌, ಇಟಲಿ, ಬ್ರಿಟನ್‌  ನಂತಹ ದೇಶಗಳು ಅಕ್ಷರಶಃ ನರಕ ಸದೃಶವಾಗಿವೆ. ಈ ದೇಶಗಳಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಸೋದ್ಯಮವನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದ ಈ ದೇಶಗಳಿಗೆ ಕೊರೋನಾ ವೈರಸ್ ಕೊಡಲಿ ಪೆಟ್ಟು  ನೀಡಿದ್ದು, ಈ ಮರ್ಮಾಘಾತದಿಂದ ಚೇತರಿಸಿಕೊಳ್ಳಲು ಈ ದೇಶಗಳಿಗೆ ವರ್ಷಗಳೇ ಹಿಡಿಯುತ್ತದೆ.

    ಈ ಬಗ್ಗೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಯೂ ಆಗಿರುವ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದ್ದು, ಭಾರತವೂ ಸೇರಿ ಜಗತ್ತಿನಾದ್ಯಂತದ ಪ್ರವಾಸೋದ್ಯಮ ಕ್ಷೇತ್ರದ ಸುಮಾರು 7.5 ಕೋಟಿಗೂ ಅಧಿಕ ಉದ್ಯೋಗಕ್ಕೆ ಸಂಚಕಾರ ಬರುವ ಸಾಧ್ಯತೆಯಿದೆ ಎಂದು ಹೇಳಿದೆ. ಈ  ಬಗ್ಗೆ ವರದಿ ತಯಾರಿಸಿರುವ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಏಪ್ರಿಲ್ 6ರಂದು ತನ್ನ ವರದಿ ನೀಡಿದ್ದು, ವಿಶ್ವದ ಶೇ.96ರಷ್ಟು ಪ್ರವಾಸೋದ್ಯಮ ಪ್ರದೇಶಗಳು ಮುಚ್ಚಲ್ಪಟ್ಟಿದ್ದು, ಎಲ್ಲ ದೇಶಗಳೂ ಟ್ರಾವೆಲ್ ಬ್ಯಾನ್ ಹೇರಿವೆ. ಶೇ.90 ರಷ್ಟು ಪ್ರವಾಸೋದ್ಯಮ ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಿವೆ.

   ವಿಶ್ವ ಪ್ರವಾಸೋದ್ಯಮ ಇತಿಹಾಸದಲ್ಲೇ ಇಂತಹುದೊಂದು ಬೆಳವಣಿಗೆ ಕಂಡುಬಂದಿರಲಿಲ್ಲ. ಎಲ್ಲ ದೇಶಗಳ ಸರ್ಕಾರಗಳೂ ಟ್ರಾವೆಲ್ ಬ್ಯಾನ್ ಹೇರಿದ್ದು, ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಇದರಿಂದ ನೇರವಾಗಿ ಮತ್ತು ಪರೋಕ್ಷವಾಗಿ  ಪ್ರವಾಸೋದ್ಯಮದ ಜೊತೆ ಸಂಪರ್ಕ ಹೊಂದಿದ್ದ ಕೋಟ್ಯಂತರ ಉದ್ಯೋಗಿಗಳು ಇಂದು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಹೇಳಿದೆ.

   ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಸಾಮಾನ್ಯ ಕಾರ್ಯದರ್ಶಿ ಜುರಾಬ್ ಪೊಲೊಲಿಕಾಶ್ವಿಲಿ ಅವರು, ಕೊರೋನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್, ಟ್ರಾವೆಲ್ ಬ್ಯಾನ್ ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಮತ್ತು ಅದಕ್ಕೆ ನೇರವಾಗಿ ಮತ್ತು  ಪರೋಕ್ಷವಾಗಿ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ಕೋಟ್ಯಂತರ ಉದ್ಯೋಗ ನಷ್ಟವಾಗುತ್ತಿದೆ. ಇಂತಹ ಸಂಕಷ್ಟದಿಂದ ಹೊರಬರಬೇಕು ಎಂದರೆ ಸರ್ಕಾರಗಳು ಆದಷ್ಟು ಬೇಗ ವೈರಸ್ ಅನ್ನು ನಿಯಂತ್ರಣಕ್ಕೆ ತಂದು ಅಥವಾ ನಿರ್ನಾಮ ಮಾಡಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಟ್ರಾವೆಲ್  ಬ್ಯಾನ್ ಆದೇಶ ಹಿಂದಕ್ಕೆ ಪಡೆಯಬೇಕು ಅಥವಾ ಕಾನೂನು ಸಡಿಲಿಸಬೇಕು. ಅಲ್ಲದೆ ಕೊರೋನಾ ವೈರಸ್ ಸೋಂಕು ಪೀಡಿತವಲ್ಲದ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು. ಇದರಿಂದ ಈ ಕ್ಷೇತ್ರದಲ್ಲಿ ಉಂಟಾಗುವ ನಷ್ಟದ ಪ್ರಮಾಣ ಕೊಂಚವಾದರೂ ತಗ್ಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap