ಟೆಹರಾನ್
ಜಾಗತಿಕ ಮಟ್ಟದಲ್ಲಿ ಇಂದು ಮಾರಾಣಾತಿಕ ಖಾಯಿಲೆ ಎಂದೇ ಕರೆಯಲ್ಪಡುವ ಕೊರೊನಾ ಸೋಂಕು ಚೀನಾದಾಚೆಗೂ ತನ್ನ ಕಬಂದ ಬಾಹುಗಳನ್ನು ಚಾಚಿದೆ. ದಕ್ಷಿಣ ಕೊರಿಯಾ, ಇರಾನ್, ಜಪಾನ್‌ಗಳಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಚೀನಾದಲ್ಲಿ ಮಂಗಳವಾರ 406 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ 52 ಮಂದಿ ಬಲಿಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ 2,718ಕ್ಕೆ ಏರಿದ್ದರೆ, 78,064 ಮಂದಿಗೆ ಸೋಂಕು ಪೀಡಿತರಾಗಿದ್ದಾರೆ.
ಇರಾನ್‌ನಲ್ಲಿ 95 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಂಗಳವಾರದ ವೇಳೆಗೆ ಕೊರೊನಾದಿಂದ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. ಕೊರೊನಾ ವೈರಸ್‌ನ ಮೂಲ ಕೇಂದ್ರವಾದ ಚೀನಾದ ಆಚೆಗೆ ಅತಿ ಹೆಚ್ಚು ಸಾವುಗಳು ಇರಾನ್‌ನಲ್ಲಿಯೇ ವರದಿಯಾಗಿವೆ.
ಈ ನಡುವೆ ಇರಾನ್‌ನ ಉಪ ಆರೋಗ್ಯ ಸಚಿವರಲ್ಲಿಯೇ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅಲ್ಲಿನ ಸಂಸದರೊಬ್ಬರಿಗೂ ಸೋಂಕು ತಗುಲಿದೆ.ಉಪ ಆರೋಗ್ಯ ಸಚಿವ ಇರಾಜ್ ಹರಿರ್ಚಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದರು. ಬಳಿಕ ಅಂತರ್ಜಾಲದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ತಿಳಿಸಿದ್ದಾರೆ.